ಕ್ಷೇತ್ರ ಪುನರ್ ವಿಂಗಡಣೆ ಮಸೂದೆ: 371 ಸಂಸದರ ಬೆಂಬಲವಿದೆ ಎಂದ ಕೇಂದ್ರ ಸರ್ಕಾರ!

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ಸಂವಿಧಾನದ 132ನೇ ತಿದ್ದುಪಡಿ ಮಸೂದೆ ಮಂಡನೆಗಾಗಿ ನಾಳೆಯಿಂದ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುತ್ತಿದ್ದು, ಕಳೆದ ಏಪ್ರಿಲ್ ನಲ್ಲಿ ಸೋಲಾಗಿದ್ದ ತಿದ್ದುಪಡಿ ಮಸೂದೆಯನ್ನು ಕೆಲವು ಬದಲಾವಣೆಗಳೊಡನೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈಗ ಮತ್ತೆ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲು ಮುಂದಾಗಿದೆ.
ಈ ಬಾರಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಎನ್ ಡಿಎ ಸರ್ಕಾರ ಹತ್ತಾರು ಕಸರತ್ತುಗಳನ್ನು ನಡೆಸುತ್ತಿದೆ. ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯ 371 ಸಂಸದರ ಬೆಂಬಲ ತನಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ಪ್ರಸ್ತಾವಿತ ಮಸೂದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಈ ಹೆಚ್ಚುವರಿ ಮೀಸಲಾತಿ ಕೋಟಾದ ಒಳಗಡೆಯೇ ಮಹಿಳೆಯರಿಗೆ ಮೀಸಲಾತಿಯನ್ನೂ ಜಾರಿಗೊಳಿಸಲಾಗುತ್ತದೆ ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣಾ ಆಯೋಗದಲ್ಲಿ ಒಬ್ಬ ಅಧ್ಯಕ್ಷರು, ಮುಖ್ಯ ಚುನಾವಣಾ ಆಯುಕ್ತರು ಅಥವಾ ಒಬ್ಬ ಚುನಾವಣಾ ಆಯುಕ್ತರು ಹಾಗೂ ಆಯಾ ರಾಜ್ಯದ ರಾಜ್ಯ ಚುನಾವಣಾ ಆಯುಕ್ತರು ಇರುತ್ತಾರೆ.
ಇದಲ್ಲದೆ, ಆಯಾ ರಾಜ್ಯಗಳಿಂದ ಐವರು ಸಂಸದರು (ಲೋಕಸಭಾ ಸದಸ್ಯರು) ಮತ್ತು ಐವರು ಶಾಸಕರು (ವಿಧಾನಸಭಾ ಸದಸ್ಯರು) ಕೂಡ ಈ ಆಯೋಗದ ಭಾಗವಾಗಿರುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ. ಪ್ರಸ್ತಾವಿತ ಮಸೂದೆಯ ಕುರಿತು ಸಂಸತ್ತಿನಲ್ಲಿ ನಡೆಯಲಿರುವ ನಿರ್ಣಾಯಕ ಕಲಾಪಗಳಿಗೆ ಮುನ್ನವೇ 371 ಸಂಸದರ ಬೆಂಬಲವಿದೆ ಎಂಬ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



