ಸಂಗ್ರಹ ಚಿತ್ರ
ರಾಜ್ಯ
ಮೈಸೂರಲ್ಲೇ ವಿಷ್ಣು ಸ್ಮಾರಕ ನಿರ್ಮಾಣ: ಭಾರತಿ ವಿಷ್ಣು ವರ್ಧನ್
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲೇ ನಿರ್ಮಾಣ ಮಾಡಲಿದ್ದೇವೆ ಎಂದು ವಿಷ್ಣುವರ್ಧನ್ ಪತ್ನಿ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲೇ ನಿರ್ಮಾಣ ಮಾಡಲಿದ್ದೇವೆ ಎಂದು ವಿಷ್ಣುವರ್ಧನ್ ಪತ್ನಿ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಇಂದು ಡಾ.ವಿಷ್ಣುವರ್ಧನ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಜೆಪಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಭಾರತಿ ವಿಷ್ಣು ವರ್ಧನ್ ಅವರು, ವಿಷ್ಣು ಸ್ಮಾರಕ ಮೈಸೂರಿನಲ್ಲೇ ನಿರ್ಮಾಣವಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸ್ಮಾರಕಕ್ಕೆ ಅಡ್ಡ ನಿಲ್ಲುವವರೇ ಹೆಚ್ಚು. ಇಂತಹ ವಿಚಾರಗಳಿಗೆಲ್ಲಾ ಅಭಿಮಾನಿಗಳು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ವಿಷ್ಣು ವರ್ಧನ್ ಸ್ಮಾರಕವನ್ನು ಎಲ್ಲರೂ ಸೇರಿ ಮಾಡೋಣ. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯಾರೇ ಅಡ್ಡ ನಿಂತರೂ ಅವರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಕಿಲ್ಲ. ಜನವರಿ 15ರ ಬಳಿಕ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣದ ಕೆಲಸಗಳು ಆರಂಭವಾಗುತ್ತವೆ. ನಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡೋಣ ಎಂದರು. ಅಂತೆಯೇ ಸಂಸ್ಕಾರದ ನಂತರ ಅಭಿಮಾನ್ ಸ್ಟುಡಿಯೋದಲ್ಲಿ ಹೇಳುವವರು, ಕೇಳುವವರು ಯಾರು ಇರಲಿಲ್ಲ. ನಾನು ಕೆಲಸ ಪ್ರಾರಂಭ ಮಾಡಿದೆ. ಅಲ್ಲಿ ಒಂದು ಪುಣ್ಯ ಭೂಮಿಯನ್ನಾಗಿ ಮಾಡಿದ ಸಂತೋಷ ಇದೆ. ಈಗ ಆ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಇನ್ನು ವಿಷ್ಣುವರ್ಧನ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದು, ವಿಷ್ಣುವರ್ಧನ್ ಅವರ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಅಂತೆಯೇ ಇದರೊಂದಿಗೆ ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನೂ ಕೂಡ ಆಯೋಜನೆ ಮಾಡಲಾಗಿದೆ.

