ಹೊಸ ವರ್ಷಾಚರಣೆ: ಬೆಂಗಳೂರು ನಗರದಲ್ಲಿ ಭಾರೀ ಭದ್ರತೆ, ಮೈಸೂರಿನಲ್ಲಿ ಹೈ ಅಲರ್ಟ್
ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಿದ್ಧಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್'ನ್ನು ನಿಯೋಜಿಸಿದ್ದಾರೆ...
ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಿದ್ಧಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್'ನ್ನು ನಿಯೋಜಿಸಿದ್ದಾರೆ.
ಬೆಂಗಳೂರು ನಗರದ ಮೇಲೆ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವ ಹಿನ್ನಲೆಯಲ್ಲಿ ಬೆಂಗಳೂರಿನಾದ್ಯಂತ ಪೊಲೀಸರು ಪಹರೆ ಬಿಗಿಗೊಳಿಸಿದ್ದಾರೆ,
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್'ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅನುಮಾನಾಸ್ಪತವಾಗಿ ಓಡಾಡುವವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ,
ಕಳೆದ ವರ್ಷಕ್ಕಿಂತಲೂ ಈ ಬಾಗಿ ಮೂರು ಪಟ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರು ಹೇಳಿದ್ದಾರೆ.
ಕಾಶ್ಮೀರವನ್ನು ಭಾರತದ ಕಪಿಮುಷ್ಟಿಯಿಂದ ವಿಮೋಚನೆಗೊಳಿಸಲು ಕೋಲ್ಕತಾ, ರಾಜಧಾನಿ ದೆಹಲಿ ಹಾಗೂ ಬೆಂಗಳೂರಿನ ಮೇಲೆ ಯುದ್ಧ ಸಾರಿ ಎಂದು ಉಗ್ರ ಸಂಘಟನೆಯ ಹೆಸರಿನಲ್ಲಿ ಕೆಲ ದಿನಗಳ ಹಿಂದಷ್ಟೇ ವಿಡಿಯೋವೊಂದು ಬಿಡುಗಡೆಯಾಗಿತ್ತು. ಈ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.
ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ನಗರದ ಲಾಡ್ಜ್ ಗಳು ಮತ್ತು ಹೋಟೆಲ್ ಗಳಲ್ಲಿ ಪೊಲೀಸರು ತೀವ್ರ ತಪಾಸಣೆಗಳನ್ನು ನಡೆಸುತ್ತಿದ್ದಾರೆ, ಹೋಟೆಲ್ ಮಟ್ಟು ಲಾಡ್ಜ್ ಗಳಲ್ಲಿ ಹಲವು ದಿನಗಳಿಂದ ತಂಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುತ್ತಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಗಳ ಉದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಫ್ತಿಯಲ್ಲಿ ಕಾರ್ಯಾಚರಣೆ ಮಾಡಲು ಪೊಲೀಸ್ ತಂಡ ಸಿದ್ಧವಾಗಿದೆ. ಅಲ್ಲದೆ ನಿಮ್ಮನ್ನು ಸಿಸಿಟಿವಿ ನೋಡುತ್ತಿದೆ ಎನ್ನುವ ಫಲಕವನ್ನೂ ಹಾಕಲಾಗಿದೆ. ಹೋಟೆಲ್ ಹಾಗೂ ಬಾರ್ ಗಳಲ್ಲಿ ರಾತ್ರಿಯಲ್ಲಿಯೂ ಸ್ಪಷ್ಟವಾಗಿ ಕಾಣಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮಾಲೀಕರಿಕೆ ಪೊಲೀಸರು ಸೂಚಿಸಿದ್ದಾರೆ.
ಹೊಯ್ಸಳ ಮತ್ತು ಪಿಂಕ್ ಹೊಯ್ಸಳ ವಾಹನಗಳು, ಚೀತಾ ವಾಹನಗಳು ಜನರ ರಕ್ಷಣೆಗೆ ಸಜ್ಜಾಗಿದ್ದು, ಪ್ರತೀ ಠಾಣೆಗೆ 2ರಂತೆ ಒಟ್ಟು 320 ಚೀತಾ ಬೈಕ್ ಗಳು ಡಿ.31 ಸಂಜೆಯಿಂದ ಜ.1 ಬೆಳಗಿನ ಜಾವದವರೆಗೂ ಗಸ್ತು ತಿರುಗಲಿವೆ.
ಇನ್ನು ಮೈಸೂರಿನಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ನಗರದೆಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆಯಾಗಿ ನಗರದ ಖಾಕಿ ಪಡೆ ಈಗಾಗಲೇ ಸಜ್ಜಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಟ್ಟಿರುವ ಪೊಲೀಸರು ಬಹಳ ಎಚ್ಚರಿಕೆ ವಹಿಸಲಿದ್ದಾರೆಂದು ತಿಳಿದುಬಂದಿದೆ.