

ಬೆಂಗಳೂರು: ಕಳೆದ ಎರಡು ದಶಕಗಳಿಂದ ಬಿಜೆಪಿ ಪ್ರಾಬಲ್ಯ ಹೊಂದಿರುವ ಬೆಂಗಳೂರು ನಗರದ ಮತದಾರರನ್ನು ತನ್ನತ್ತ ಸೆಳೆದುಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್ ರಸ್ತೆ ಸೇರಿದಂತೆ ನಗರದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವೆಡೆಗೆ ತನ್ನ ಗಮನ ಕೇಂದ್ರೀಕರಿಸಿದೆ.
ಈ ವರ್ಷ ಮತ್ತು ಮುಂದಿನ ವರ್ಷಗಳಲ್ಲಿ ಬೆಂಗಳೂರಿನ ರಸ್ತೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ 7,300 ಕೋಟಿ ರು ಹಣ ಮೀಸಲಿಟ್ಟಿದೆ. ಸೋಮವಾರ ಆರಂಭವಾದ ಐದು ದಿನಗಳ ಬಜೆಟ್ ಅಧಿವೇಶನದಲ್ಲಿ ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಬಾಯಿ ವಾಲಾ ಈ ವಿಷಯ ಹೇಳಿದ್ದಾರೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಸರ್ಕಾರದ ಕಣ್ಣು ಬೆಂಗಳೂರು ನಗರದ 28 ವಿಧಾನಸಭೆ ಸೀಟುಗಳನ್ನು ಪಡೆಯುವುದಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 12, ಹಾಗೂ ಜೆಡಿಎಸ್ 3 ಸಿಟುಗಳನ್ನು ಪಡೆದಿತ್ತು, ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪಾರುಪತ್ಯ ಮೆರೆದಿತ್ತು. ಜೊತೆಗೆ ಬಿಬಿಎಂಪಿ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಪಡೆದಿತ್ತು.
ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 7,300 ಕೋಟಿ ರೂ ಮೀಸಲಿಟ್ಟಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ, ಆದರೆ ಬೆಂಗಳೂರು ನಗರದ ರಸ್ತೆ ಅಗಲೀಕರಣ, ಕೆರೆ ಅಭಿವೃದ್ಧಿ. ರೈಲ್ವೆ ಕ್ರಾಸಿಂಗ್, ಮಳೆ ನೀರು ಸಂಗ್ರಹ ಹಾಗೂ ಚರಂಡಿ ದುರಸ್ತಿ ಕಾರ್ಯಗಳಿಗಾಗಿ ಈ ಹಣವನ್ನು ಮೀಸಲಿರಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಾರಿಗೆ ಮತ್ತು ವೈಜ್ಞಾನಿಕ ಸಂಚಾರ ನಿರ್ವಹಣೆ ಸಂಚಾರ ಸಮಸ್ಯೆಗಳ ಬಗೆಹರಿಸಲು ಮಾರ್ಗದರ್ಶನ ಅತ್ಯಗತ್ಯ ಎಂದು ವಜುಬಾಯಿ ವಾಲಾ ಅಭಿಪ್ರಾಯ ಪಟ್ಟಿದ್ದಾರೆ.ಏಪ್ರಿಲ್ 2017 ರ ವೇಳೆಗೆ ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳಲಿದೆ, 2 ನೇ ಹಂತದ ಮೆಟ್ರೋ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.