ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಪ್ಪಳದಲ್ಲಿ 5600 ಕೋಟಿ ರು. ವೆಚ್ಚದಲ್ಲಿ ಜಲಾಶಯ ನಿರ್ಮಾಣ: ಎಂಬಿ ಪಾಟೀಲ್

ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನೀರ ಅಭಾವ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಮಾರು 5,600 ಕೋಟಿ ರು.ವೆಚ್ಚದಲ್ಲಿ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
Published on

ಕೊಪ್ಪಳ: ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನೀರ ಅಭಾವ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಮಾರು 5,600 ಕೋಟಿ ರು.ವೆಚ್ಚದಲ್ಲಿ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ನಿರುಪಯೋಗವಾಗಿ ಹರಿದು ಹೋಗುತ್ತಿರುವ ನೀರನ್ನು ಉಳಿಸಿಕೊಳ್ಳುವ ಸಲುವಾಗಿ  ಸರ್ಕಾರ ಕೊಪ್ಪಳದ ನವಿಲೆಯಲ್ಲಿ 35 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಹಲವು ವರ್ಷಗಳಿಂದಲೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ಎತ್ತಲು ಸಾಕಷ್ಟು ಮನವಿಗಳು  ಬಂದಿವೆ. ಆದರೆ ಕಳೆದ 6 ದಶಕಗಳಿಂದಲೂ ಜಲಾಶಯದಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆಗೆಯುವುದು ತಾಂತ್ರಿಕವಾಗಿ ಆಸಾಧ್ಯ ಎಂದು ತಿಳಿದಿದೆ. ಹೀಗಾಗಿ ಹೂಳಿನಿಂದ ಪೋಲಾಗುತ್ತಿರುವ ನೀರನ್ನು ಉಳಿಸಿಕೊಳ್ಳುವ  ಸಲುವಾಗಿ ಕೊಪ್ಪಳದಲ್ಲಿ ನಿರ್ವಹಣಾ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿಯ ಹೊಸಪೇಟೆಯಲ್ಲಿರುವ ತುಂಗಭದ್ರ ಜಲಾಶಯಕ್ಕೆ ಪ್ರತೀ ವರ್ಷ ಸುಮಾರು ಅರ್ಧ ಟಿಎಂಸಿಯಷ್ಟು ಹೂಳು ಹರಿದು ಬರುತ್ತಿದೆ. ಹೂಳು ತೆಗೆಯುವುದು ತಾಂತ್ರಿಕವಾಗಿ ಅಸಾಧ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೂ  ಹೂಳು ತೆಗೆದರೆ ಆ ಹೂಳನ್ನು ವಿಸರ್ಜಿಸಲೆಂದೇ ಸುಮಾರು 66 ಸಾವಿರ ಎಕರೆ  ಭೂಮಿ ಬೇಕು. ಹೀಗಾಗಿ ಕೊಪ್ಪಳದ ನವಿಲೆ ಬಳಿ 18 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಹವಹಣಾ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.  ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ಪೋಲಾಗಿ ಹರಿಯುವ ನೀರನ್ನು ಈ ನೂತನ ಜಲಾಶಯದಲ್ಲಿ ಶೇಖರಿಸಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ.

ಪ್ರಸ್ತುತ ಉದ್ದೇಶಿಸಿರುವ ಜಾಗ ಒಣಭೂಮಿಯಿಂದ ಕೂಡಿದೆ. ಕೃಷಿ ಕಾರ್ಯಕ್ಕೆ ಬಳಕೆ ಮಾಡಲಾಗದ ಭೂಮಿಯಾಗಿದ್ದು, ಇಲ್ಲಿ ಸರ್ಕಾರ ಜಲಾಶಯ ನಿರ್ಮಾಣ ಮಾಡಲಿದೆ. ಜಲಾಶಯ ನಿರ್ಮಾಣಕ್ಕೆ ಸುಮಾರು 5600 ಕೋಟಿ  ರು.ವೆಚ್ಚವಾಗಲಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ 27 ದೊಡ್ಡ ಮತ್ತು ಮಧ್ಯಮ ಗಾತ್ರದ ಡ್ಯಾಂಗಳ ಉನ್ನತೀಕರಣ
ಇನ್ನು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ನೀರಿನ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ 27 ಪ್ರಮುಖ ದೊಡ್ಡ ಮತ್ತು ಮಧ್ಯಮ ಗಾತ್ರದ ಜಲಾಶಯಗಳನ್ನು ಉನ್ನತೀಕರಿಸಿ ಹೆಚ್ಚಿನ ಪ್ರಮಾಣದ ನೀರನ್ನು  ಸಂಗ್ರಹಿಸಿಡುವಂತೆ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ ಆಸ್, ಆಲಮಟ್ಟಿ, ನಾರಾಯಣ ಪುರ ಜಲಾಶಯಗಳೂ ಕೂಡ ಸೇರಿವೆ. 2018ರ ಜೂನ್ ಒಳಗೆ ಈ ಕಾರ್ಯ  ಪೂರ್ಣಗೊಳ್ಳುವಂತೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ವಿಶ್ವಬ್ಯಾಂಕ್ ಆರ್ಥಿಕ ಸಲಹೆ ಕೂಡ ಕೇಳಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com