

ಬೆಂಗಳೂರು: ಕಾವೇರಿ ನದಿಯಿಂದ ತಮಿಳುನಾಡು ರಾಜ್ಯಕ್ಕೆ ಹರಿಯುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಮೇಕೆದಾಟು ಬಳಿ ರೂ.5.912 ಕೋಟಿ ವೆಚ್ಚದಲ್ಲಿ 66.50 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರವ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಕಾವೇರಿ ನದಿಯಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಿದ ಬಳಿಕವೂ ಹೆಚ್ಚುವರಿಯಾಗಿ 35 ರಿಂದ 265 ಟಿಎಂಸಿ ನೀರು ಹರಿದು ಸಮುದ್ರಕ್ಕೆ ಸೇರುತ್ತಿತ್ತು. ಹೀಗಾಗಿ ಈ ಹೆಚ್ಚುವರಿ ನೀರಿನ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಯೋಜನೆಯಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪದಾನೆ ಜೊತೆಗೆ ಜಲಾಶಯದ ಮೇಲ್ಭಾಗದ ಜನರಿಗೆ 66.50ಟಿಎಂಸಿ ನೀರು ಬಳಕೆಗೆ ಲಭ್ಯವಾಗಲಿದೆ. ನ್ಯಾಯಾಧಿಕರಣದ ತೀರ್ಪಿನ ಅನ್ವಯ 192 ಟಿಎಂಸಿ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿದ ಬಳಿಕವೂ ಮಳೆ ಬಂದಾಗ ಹೆಚ್ಚುವರಿ ನೀರು ಹರಿದು ಹೋಗುತ್ತಿತ್ತು. ಈ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಲು ರಾಜ್ಯದಲ್ಲಿ ಯಾವುದೇ ಜಲಾಶಯಗಳಿರಲಿಲ್ಲ. ಹೀಗಾಗಿ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದ್ದು, ಕೇಂದ್ರ ಜಲ ಆಯೋಗ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಕಾವೇರಿ ಮೇಲ್ವಿಚಾರಣಾ ಸಮತಿಯ ಅನುಮತಿಗೆ ಅಱ್ಜಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
. ಮೇಕೆದಾಟು ಯೋಜನೆಗೆ ಸುಮಾರು 4,906 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ. ಜಲಾಶಯವು 441 ಮೀಟರ್ ಒಟ್ಟು ಉದ್ದ ಹಾಗೂ 395 ಮೀಟರ್ ಎತ್ತರದ ನಿರ್ಮಾಣವನ್ನು ಒಳಗೊಳ್ಳಲಿದೆ. ಇದರಿಂದ 66.50 ಟಿಎಂಸಿ ಸಂಗ್ರಹ ಸಾಮರ್ಥ್ಯ ಹಾಗೂ 7.7 ಟಿಎಂಸಿ ಡೆಡ್ ಸ್ಟೊರೇಜ್ ಸಾಮರ್ಥ್ಯ ಹೊಂದಲಿದೆ ಎಂದು ತಿಳಿಸಿದರು.
ಈ ಬಾರಿ ತಮಿಳುನಾಡಿನಲ್ಲಿ ಮಾನ್ಸೂನ್ ಉತ್ತಮವಾಗಿದ್ದರೂ ಐತಿಹಾಸಿಕ ಎಂಬಂತೆ 30 ರಿಂದ 260 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗಿದೆ. ಹೆಚ್ಚುವರಿ ನೀರನ್ನು ಯೋಜನೆ ಮೂಲಕ ರಾಜ್ಯ ಸರ್ಕಾರ ಇನ್ನು ಮುಂದೆ ಬಳಕೆ ಮಾಡಿಕೊಳ್ಳಲಿದೆ ಎಂದರು.
ಇದೇ ವೇಳೆ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಯೋಜನೆಗೆ ಅನುಮತಿ ಕೋರಿ ಈಗಾಗಲೇ ಸವಿವರ ವರದಿಯನ್ನು ಕೇಂದ್ರ ಸರ್ಕಾರದ ಜಲ ಆಯೋಗ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಸಲ್ಲಿಕೆ ಮಾಡಲಾಗಿದೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಬಹುದು. ನಾವು ನಮ್ಮ ವಾದವನ್ನು ಮಂಡಿಸುತ್ತೇವೆ. ಇದರಲ್ಲಿ ಮುಚ್ಚಿಡುವ ವಿಚಾರಗಳಾವುದೂ ಇಲ್ಲ. ಎಲ್ಲಾ ವಿಷಯವೂ ಚರ್ಚೆ ಆಗಲೇಬೇಕು. ಯೋಜನೆ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಮಾನ್ಸೂನ್ ಉತ್ತಮವಾಗಿದ್ದಾಗ ನೀರನ್ನು ಸಂಗ್ರಹಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದರಲ್ಲದೆ ಸಚಿವ ಸಂಪುಟ 1000 ವರ್ಷಗಳಷ್ಟು ಹಳೆಯದಾದ ಟಿ.ನರಸೀಪುರ ತಾಲೂಕಿನ ಮಾಧವಮಂತ್ರಿ ಅಣೆಕಟ್ಟೆಗೆ ದುರಸ್ತಿಗೆ ರೂ.62 ಕೋಟಿ ವೆಚ್ಚದ ಯೋಜನೆಗೂ ಒಪ್ಪಿಗೆ ನೀಡಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದರು.