

ಮೈಸೂರು: ಸಹಪಾಠಿ ವಿದ್ಯಾರ್ಥಿಯಿಂದ 100 ರೂಪಾಯಿ ಕಳ್ಳತನ ಮಾಡಿದ ಎಂಬ ಆರೋಪಕ್ಕೆ ನೊಂದ 13 ವರ್ಷದ ಬಾಲಕನೊಬ್ಬ ಆತ್ಮಹ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪವನ್ ಆತ್ಮಹತ್ಯೆ ಶರಣಾದ ವಿದ್ಯಾರ್ಥಿ (13). ಈತ ಭೈರವೇಶ್ವರ ನಗರದ ಶಾಲೆಯೊಂದರ 7ನೇ ತರಗತಿಯಲ್ಲಿ ಓದುತ್ತಿದ್ದ. ನಿನ್ನೆ ತರಗತಿಯಲ್ಲಿ ಸೈನ್ಸ್ ಎಕ್ಸ್‌ಪೋಗೆ ವಿದ್ಯಾರ್ಥಿಯೊಬ್ಬ 100 ರೂಪಾಯಿ ಹಣ ತಂದಿದ್ದಾನೆ. ಈ ಹಣ ಶಾಲೆಯಲ್ಲಿ ಕಳವಾಗಿತ್ತು. ಸಂಜೆ ದೈಹಿಕ ಶಿಕ್ಷಕಿ ತರಗತಿಯಲ್ಲಿದ್ದ 17 ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡಿದರು. ಪವನ್ ಬ್ಯಾಗ್‌ನಲ್ಲಿ 80 ರೂಪಾಯಿ ಹಣ ಸಿಕ್ಕಿದೆ. ಆಗ ಪವನ್ ದುಡ್ಡು ನಾನು ಕದ್ದಿಲ್ಲ. ಯಾರೋ ನನ್ನ ಬ್ಯಾಗ್‌ಗೆ ಹಣ ಹಾಕಿದ್ದಾರೆ ಎಂದು ಹೇಳಿದ್ದಾನೆ. ಶಿಕ್ಷಕಿ ಪವನ್‌ಗೆ ಬುದ್ಧಿಮಾತು ಹೇಳಿ ಅವನಿಂದ 80 ರೂಪಾಯಿ ಹಣ ಪಡೆದು 20 ರೂಪಾಯಿ ಖರ್ಚು ಮಾಡಿಕೊಂಡಿದ್ದಾನೆ, ಪರವಾಗಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಶಾಲೆಯಿಂದ ಬೇಗ ಮನೆಗೆ ಬಂದ ಪವನ್ ಪಕ್ಕದ ಮನೆಯಲ್ಲಿದ್ದ ತಾಯಿಯ ಬಳಿ ಮನೆಯ ಬೀಗ ತೆಗೆದುಕೊಂಡು ಹೋಗಿದ್ದಾನೆ. ರೂಮ್‌ಗೆ ತೆರಳಿದ ಪವನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ನಾನು ಆತನಿಗೆ 100 ರೂಪಾಯಿ ನೀಡಿದ್ದೆ. ಅದರಲ್ಲಿ 20 ರೂಪಾಯಿ ಬುಕ್-ಪೆನ್ ತೆಗೆದುಕೊಂಡಿದ್ದಾನೆ. ಉಳಿದ 80 ರೂಪಾಯಿ ಅವನ ಬಳಿ ಇತ್ತು. ಆದರೆ ಶಾಲೆಯಲ್ಲಿ ಸಹಪಾಠಿಯಿಂದ 100 ರೂಪಾಯಿ ಕದ್ದಿದ್ದಾನೆ ಎಂದು ಶಿಕ್ಷಕರು ಪವನ್‌ನ್ನು ಅವಮಾನ ಮಾಡಿದ್ದಾರೆ. ಇದರಿಂದ ನನ್ನ ಮಗ ನೇಣಿಗೆ ಶರಣಾಗಿದ್ದಾನೆ ಎಂದು ತಂದೆ ದೇವರಾಜು ಆರೋಪಿಸಿದ್ದಾರೆ.