ಕೊನೆಗೂ ಠಾಣೆಗೆ ಬಂದು ದುಷ್ಕರ್ಮಿಗಳ ಗುರುತಿಸಿದ ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಸಂತ್ರಸ್ತೆ!

ಹೊಸ ವರ್ಷಾಚರಣೆ ವೇಳೆ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೊನೆಗೂ ಸಂತ್ರಸ್ತ ಯುವತಿ ದುಷ್ಕರ್ಮಿಗಳ ಗುರುತು ಪತ್ತೆ ಮಾಡಿದ್ದಾರೆ.
ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿ
ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೊನೆಗೂ ಸಂತ್ರಸ್ತ ಯುವತಿ ದುಷ್ಕರ್ಮಿಗಳ ಗುರುತು ಪತ್ತೆ ಮಾಡಿದ್ದಾರೆ.

ಪ್ರಕರಣ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಕಮ್ಮನಹಳ್ಳಿಯಲ್ಲಿದ್ದ ತನ್ನ ಮನೆಯನ್ನು ಸಂತ್ರಸ್ತ ಯುವತಿ ಬದಲಿಸಿದ್ದರು. ಇದರಿಂದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ತೀವ್ರ ಹಿನ್ನಡೆಯಾಗಿತ್ತು. ಇತ್ತ  ಪ್ರಕರಣದಲ್ಲಿನ ಶಂಕಿತ ಆರೋಪಿಗಳನ್ನು ಬಂಧಿಸಿದ್ದರೂ ಯುವತಿ ಗುರುತು ಪತ್ತೆ ಮಾಡದ ಹಿನ್ನಲೆಯಲ್ಲಿ ತನಿಖೆ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಈ ಹಿಂದೆ 2 ಬಾರಿ ಗುರುತು ಪತ್ತೆ ಕಾರ್ಯಕ್ಕಾಗಿ  ಪೊಲೀಸರು ಶಂಕಿತ ಆರೋಪಿಗಳ ಪರೇಡ್ ಗೆ ಸಿದ್ಧತೆ ನಡೆಸಿದ್ದರೂ ಯುವತಿ ಮಾತ್ರ ಠಾಣೆಗೆ ಆಗಮಿಸಿರಲಿಲ್ಲ. ಹೀಗಾಗಿ ಪ್ರಕರಣ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲಾಗದೇ ಪೊಲೀಸರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದರು.

ಈ ಬಗ್ಗೆ ನಿನ್ನೆಯಷ್ಟೇ ಸಾಕಷ್ಟು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಪೊಲೀಸರು ಕೂಡ ಠಾಣೆಗೆ ಬಂದು ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಯುವತಿಯನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಇದೀಗ ಸಂತ್ರಸ್ತ ಯುವತಿ  ಠಾಣೆಗೆ ಬಂದು ತನ್ನ ಮೇಲೆ ದೌರ್ಜನ್ಯವೆಸಗಿದ ದುಷ್ಕರ್ಮಿಗಳನ್ನು ಗುರುತಿಸಿದ್ದಾಳೆ ಎಂದು ಪೊಲೀಸ್ ಸಹಾಯಕ ಆಯುಕ್ತರಾದ ರವಿ ಕುಮಾರ್ ಅವರು ಹೇಳಿದ್ದಾರೆ. "ಸಂತ್ರಸ್ತ ಯುವತಿ ಪ್ರಕರಣದ ಬಳಿಕ ಆಘಾತಕ್ಕೊಳಗಾಗಿದ್ದಳು.  ಹೀಗಾಗಿ ಮಾಧ್ಯಮಗಳು ಮತ್ತು ಪೊಲೀಸರಿಂದ ದೂರವಿರಲು ಚಿಂತಿಸಿದ್ದಳು. ಇದೇ ಕಾರಣಕ್ಕಾಗಿ ಮನೆ ಖಾಲಿ ಮಾಡಿ ಬೇರೊಂದು ಮನೆಯಲ್ಲಿ ವಾಸವಾಗಿದ್ದಳು, ನಾವು ಪೊಲೀಸರು ಆಕೆಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ  ಹೇಳಿ ಸಂತೈಸಿದ ಬಳಿಕವಷ್ಟೇ ಆಕೆ ಆರೋಪಿಗಳ ಗುರುತು ಪತ್ತೆ ಮಾಡಿದಳು ಎಂದು ಮಾಹಿತಿ ನೀಡಿದ್ದಾರೆ. ಅಂತೆಯೇ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್  ಸಲ್ಲಿಸುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಜನವರಿ ಬೆಳಗಿನ ಜಾವ 2:15ರ ಸುಮಾರಿನಲ್ಲಿ ಎಂಜಿ ರಸ್ತೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ದೃಶ್ಯ  ಅಲ್ಲಿಯೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಬಾಣಸವಾಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಅಯ್ಯಪ್ಪ, ಲೆನೋ,  ಸುದೇಶ್, ಜೇಮ್ಸ್, ಸೋಮಶೇಖರ್ ಮತ್ತು ಜಾರ್ಜ್ ಎಂಬುವರನ್ನು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com