

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಕಳೆದ ವಾರ ನಡೆದ ಇಬ್ಬರು ಜೆಡಿಎಸ್ ಕಾರ್ಯಕರ್ತರ ಕೊಲೆ ಪ್ರಕರಣವನ್ನು ಗೃಹ ಸಚಿವ ಜಿ. ಪರಮೇಶ್ವರ್ ಸಿಐಡಿ ತನಿಖೆಗೆ ವಹಿಸಿದ್ದಾರೆ.
ಡಿಸೆಂಬರ್ 25 ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ನಂದೀಶ್ ಮತ್ತು ಮುತ್ತರಾಜ್ ಎಂಬುವರನ್ನ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ಇರಿದು ಕೊಲ್ಲಲಾಗಿತ್ತು. ಗ್ರಾಮದಲ್ಲಿ ಕುಡಿಯುವ ನೀರಿನ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದರು.
ಭಾನುವಾರ ಕೆಆರ್ ಪೇಟೆ ತಾಲೂಕಿನ ಮುರುಕನಹಳ್ಳಿಯ ಹರೀಶ್ ಎಂಬಾತನ ಕೊಲೆಯಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹರೀಶ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಸಚಿವ ಪರಮೇಶ್ವರ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದ್ದಾರೆ.