
ಬೆಂಗಳೂರು: ಸಹಕಾರಿ ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ಮರಣ ಸುದ್ದಿಗೆ ಸಂಬಂಧಿಸಿದಂತೆ ರಾಜಕೀಯ ವಲಯದ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹದೇವ ಪ್ರಸಾದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಬಿಎಸ್ ಯಡಿಯೂರಪ್ಪ ಅವರು, "ಮಹದೇವ ಪ್ರಸಾದ್ ಅವರ ಸಾವಿನ ಸುದ್ಧಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ನೀಡಲಿ" ಎಂದು ಹೇಳಿದ್ದಾರೆ.
ಅಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಸಹಕಾರಿ ಸಚಿವ ಮಹದೇವ ಪ್ರಸಾದ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಟ್ವೀಟ್ ಮಾಡಿದ್ದು, ಮಹದೇವ ಪ್ರಸಾದ್ ಅವರ ಸಾವಿನ ಸುದ್ದಿ ಕೇಳಿ ನೋವಾಗಿದೆ. ಅವರಿಗಿನ್ನೂ ಕೇವಲ 58 ವರ್ಷ ವಯಸ್ಸು. ಇಷ್ಟು ಚಿಕ್ಕವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Advertisement