ಕೆಜಿ ಹಳ್ಳಿ ಮುತ್ತಿನ ಪ್ರಕರಣಕ್ಕೆ ಟ್ವಿಸ್ಟ್; ಯುವತಿಯ ಮದುವೆಯಾಗಲು ಆರೋಪಿ ಹೈಡ್ರಾಮಾ!

ಕೆಜಿ ಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಯುವತಿಯೊಂದಿಗೆ ಮದುವೆಯಾಗಲು ಸ್ವಂತ ಭಾವನೇ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ
ಸಿಸಿಟಿವಿ ದೃಶ್ಯಾವಳಿ

ಬೆಂಗಳೂರು: ಕೆಜಿ ಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಯುವತಿಯೊಂದಿಗೆ ಮದುವೆಯಾಗಲು ಸ್ವಂತ ಭಾವನೇ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆಯೇ ಪ್ರಕರಣದ ತನಿಖೆ ತೀವ್ರಗೊಳಿಸಿದ್ದ ಪೊಲೀಸರು ನಿನ್ನೆ ಆರೋಪಿ ಇರ್ಷಾದ್ ಖಾನ್ ಎಂಬಾತನನ್ನು ಬಂಧಿಸಿದ್ದರು. ಬಂಧಿತ ಇರ್ಷಾದ್ ಖಾನ್ ಯುವತಿ  ಭಾವನಾಗಿದ್ದು, ಕಳೆದ 6 ವರ್ಷಗಳ ಹಿಂದೆ ಯುವತಿಯ ಅಕ್ಕನನ್ನು ಮದುವೆಯಾಗಿದ್ದ. ಆದರೆ ತನ್ನ ನಾದಿನಿ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ ಇರ್ಷಾದ್ ಆಕೆಯನ್ನು ಮದುವೆಯಾಗುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯದ  ಹೈಡ್ರಾಮಾ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು, "ಇರ್ಷಾದ್ ಖಾನ್ ಹಾಗೂ ಸಂತ್ರಸ್ತ ಯುವತಿ ಪರಸ್ಪರ 3  ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೀಗಾಗಿ ಆಕೆಯನ್ನು ತಾನೇ ಮದುವೆಯಾಗಬೇಕು ಎನ್ನುವ ಉದ್ದೇಶದಿಂದ ಇರ್ಷಾದ್ ಖಾನ್ ಈ ಲೈಂಗಿಕ ದೌರ್ಜನ್ಯ ಹೈಡ್ರಾಮಾ ಸೃಷ್ಟಿ ಮಾಡಿದ್ದ ಎಂದು ಹೇಳಿದ್ದಾರೆ.

"ವಿಚಾರಣೆ ವೇಳೆ ಇರ್ಷಾದ್ ಖಾನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈ ವೇಳೆ ಯುವತಿಯನ್ನು ಮದುವೆಯಾಗುವುದಕ್ಕಾಗಿ ಲೈಂಗಿಕ ದೌರ್ಜನ್ಯದ ಡ್ರಾಮಾ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ತನ್ನ ನಾದಿನಿಗೆ ಮನೆಯಲ್ಲಿ ಮದುವೆ  ಸಂಬಂಧಗಳನ್ನು ನೋಡುತ್ತಿದ್ದರು. ಇದರಿಂದ ಆತಂಕಕ್ಕೀಡಾಗಿ ತಾನು ಕೃತ್ಯ ಮಾಡಿರುವುದಾಗಿ ಇರ್ಷಾದ್ ಹೇಳಿಕೊಂಡಿದ್ದಾನೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಮಾಜಕ್ಕೆ ತಿಳಿದರೆ ಅಕೆಯನ್ನು ಯಾರೂ  ಮದುವೆಯಾಗಲು ಮುಂದೆ ಬರುವುದಿಲ್ಲ. ಆಗ ತಾನೇ ಆಕೆಯನ್ನು ಮದುವೆಯಾಗಬಹುದು ಎಂದು ತಿಳಿದು ಹೀಗೆ ಮಾಡಿರುವುದಾಗಿ ಇರ್ಷಾದ್ ಹೇಳಿದ್ದಾನೆ ಪೊಲೀಸರು ತಿಳಿಸಿದ್ದಾರೆ.

ಮಾಸ್ಟರ್ ಪ್ಲಾನ್ ಗೆ ನೆರವಾಗಿತ್ತು ಹೊಸ ವರ್ಷಾಚರಣೆ ಲೈಂಗಿಕ ದೌರ್ಜನ್ಯ

ಇನ್ನು ತನ್ನ ನಾದಿನಿ ಮದುವೆಯಾಗಲು ಹವಣಿಸುತ್ತಿದ್ದ ಇರ್ಷಾದ್, ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಸ್ಪೂರ್ತಿ ಪಡೆದಿದ್ದನಂತೆ. ಕಮ್ಮನಹಳ್ಳಿ ಪ್ರಕರಣದಂತೆ ತನ್ನ ನಾದಿನಿ  ಮೇಲೆ ಲೈಂಗಿಕ  ದೌರ್ಜನ್ಯವಾದರೆ ಯಾರೂ ಆಕೆಯನ್ನು ವಿವಾಹವಾಗುವುದಿಲ್ಲ ಎಂದು ಭಾವಿಸಿ ಆಕೆಯೊಂದಿಗೆ ಸೇರಿ ಲೈಂಗಿಕ ದೌರ್ಜನ್ಯ ಡ್ರಾಮಾ ಮಾಡಿರುವುದಾಗಿ ಇರ್ಷಾದ್ ಖಾನ್ ಹೇಳಿಕೊಂಡಿದ್ದಾನೆ. ಅಂತೆಯೇ ಇದಕ್ಕಾಗಿ  ಸಿಸಿಟಿವಿ ಇದ್ದ ಗೋವಿಂದಪುರ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಇರ್ಷಾದ್ ಹೇಳಿಕೊಂಡಿದ್ದಾನೆ.

ಘಟನೆ ನಡೆದ ಬಳಿಕ ತಾನೇ ಸಿಸಿಟಿವಿ ಇದ್ದ ಮನೆ ಮಾಲೀಕ ಮುಜೀಬ್ ಖಾನ್ ಅವರ ಮನೆಗೆ ತೆರಳಿ ಇಲ್ಲಸಲ್ಲದ ಕಥೆಗಳನ್ನು ಹೇಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಎಂದು ಪೊಲೀಸರು  ತಿಳಿಸಿದ್ದಾರೆ.

ಆರೋಪಿಯ ಸುಳಿವು ನೀಡಿತ್ತು ನಡಿಗೆ ಶೈಲಿ
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣದ ತನಿಖೆ ನಡೆಸುವಾಗ ಸಂತ್ರಸ್ತ ಯುವತಿ ಮತ್ತು ಇರ್ಷಾದ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ಹೇಳಿಕೆ ನೀಡುತ್ತಿದ್ದ  ಯುವತಿ ಒಮ್ಮೆ ದುಷ್ಕರ್ಮಿ ತುಟಿ ನಾಲಿಗೆ ಕಚ್ಚಿದ ಎಂದು ಹೇಳಿಕೆ ನೀಡಿದರೆ, ಮತ್ತೊಂದು ಹೇಳಿಕೆಯಲ್ಲಿ ತಾನೇ ನಾಲಿಗೆ ಕಚ್ಚಿಕೊಂಡಿದ್ದಾಗಿ ಹೇಳಿಕೊಂಡಿದ್ದಳು. ಹೀಗಾಗಿ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.  ಇನ್ನು ಸಿಸಿಟಿವಿಯಲ್ಲಿ ಕಂಡಿದ್ದ ವ್ಯಕ್ತಿಯ ನಡಿಗೆ ಶೈಲಿ ಹಾಗೂ ಯುವತಿಯೊಂದಿಗೆ ದೂರು ನೀಡಲು ಬಂದಿದ್ದ ಆರೋಪಿಯ ನಡಿಗೆ ಶೈಲಿ ಎರಡೂ ಒಂದೇ ರೀತಿಯಾಗಿದ್ದ ಅಂಶವನ್ನು ಮನಗಂಡ ಪೊಲೀಸರು ಇರ್ಷಾದ್ ನನ್ನು ವಶಕ್ಕೆ  ಪಡೆದು ವಿಚಾರಣೆ ನಡೆಸಿದಾಗ ಭಾವ ಮತ್ತು ನಾದಿನಿಯ ಹೈಡ್ರಾಮಾ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com