ಮಂತ್ರಿ ಮಾಲ್ ಗೋಡೆ ಕುಸಿತ; ತನಿಖೆಗೆ ತಾಂತ್ರಿಕ ತಜ್ಞರ ಸಮಿತಿ ರಚನೆ

ಮಲ್ಲೇಶ್ವರದ ಮಂತ್ರಿ ಮಾಲ್ ಗೋಡೆ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಸದೃಢತೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಬಿಬಿಪಿಎಂ ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಮಾಲ್ ಗೋಡೆ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಸದೃಢತೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಬಿಬಿಪಿಎಂ ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸಿದೆ.

ಮೂಲಗಳ ಪ್ರಕಾರ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ, ಸಿವಿಲ್‌ ಏಡ್‌ ಟೆಕ್ನೋ ಕ್ಲಿನಿಕ್‌ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯಸ್ಥ ಡಾ.ಕೆ.ಎಸ್‌. ಜಯಸಿಂಹ, ತಾಂತ್ರಿಕ ನಿರ್ದೇಶಕ ಡಾ.ಆರ್‌.ನಾಗೇಂದ್ರ, ಹಿರಿಯ ನಿರ್ದೇಶಕ ಡಾ.ಎಂ.ಎಸ್‌. ಸುದರ್ಶನ್‌ ಅವರನ್ನೊಳಗೊಂಡ ಈ ತಾಂತ್ರಿಕ ಸಮಿತಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರು ಸಮಿತಿಯ ಅಧ್ಯಕ್ಷ ಹಾಗೂ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರು ಸಂಚಾಲಕರಾಗಿದ್ದಾರೆ.

ಈ ತಾಂತ್ರಿಕ ಸಮಿತಿ ಮಂತ್ರಿಮಾಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ತನ್ನ ವರದಿ ನೀಡುವವರೆಗೂ ಮಂತ್ರಿ ಮಾಲ್‌ ಬಂದ್‌ ಆಗಿ ಇರಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಂಜುನಾಥ್‌ ಪ್ರಸಾದ್‌ ಅವರು, "ಸಮಿತಿಯು ಗೋಡೆ ಕುಸಿದಿರುವ ಮಂತ್ರಿ ಮಾಲ್ ನ ಸ್ಥಳ ಪರೀಕ್ಷಣೆ ಮಾಡಿ, ಕಟ್ಟಡದ ಸದೃಢತೆ ಮತ್ತು ಸುರಕ್ಷತೆಗೆ ಅವಶ್ಯವಿರುವ ಐ.ಎಸ್‌ ಮಾನದಂಡದ ಪ್ರಕಾರ ಪರೀಕ್ಷೆಗಳನ್ನು ನಡೆಸಲಿದ್ದಾರೆ. 15 ದಿನಗಳಲ್ಲಿ ತಾಂತ್ರಿಕ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಟ್ಟಡದ ಒಂದು ಗೋಡೆ ಕುಸಿದಿದೆ ಎಂದ ಮಾತ್ರಕ್ಕೇ ಇಡೀ ಕಟ್ಟಡ ಸುರಕ್ಷಿತವಲ್ಲ ಎಂದು ಹೇಳಲು ಸಾಧ್ಯವಿಲ್ಲ: ಜಂಟಿ ಆಯುಕ್ತ ಪಿ.ಆರ್.ಪಳಂಗಪ್ಪ
ಇನ್ನು ಗೋಡೆ ಕುಸಿತ ಜಾಗಕ್ಕೆ ಮಂಗಳವಾರ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಪಿ.ಆರ್.ಪಳಂಗಪ್ಪ ಸೇರಿದಂತೆ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಳಂಗಪ್ಪ ಅವರು, "ಮಂತ್ರಿ ಸ್ಕ್ವೇರ್‌ ಅನ್ನು ಸಂಪೂರ್ಣ ನೆಲಸಮ ಮಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕಟ್ಟಡದ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಲಿದೆ. ತನಿಖಾ ವರದಿ ಬಂದ ಬಳಿಕ ಕಟ್ಟಡ ನೆಲಸಮ ಮಾಡಬೇಕೋ? ಅಥವಾ ಹಾನಿಗೊಳಗಾದ ಭಾಗವನ್ನಷ್ಟೇ ತೆರವುಗೊಳಿಸಬೇಕೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ "ಮಾಲ್‌ನ ಹಿಂಭಾಗದ ನಾಲ್ಕನೇ ಮಹಡಿಯ ಸರ್ವೀಸ್ ಕಾರಿಡಾರ್ ಗೋಡೆ ಕುಸಿದಿದೆ. ಹೀಗಾಗಿ ನಾಲ್ಕನೇ ಮಹಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೂರನೇ ಮಹಡಿಯ ಗೋಡೆಯ ಕೆಲ ಭಾಗವೂ ಕುಸಿದಿದೆ. ಎರಡೂ ಮಹಡಿಯ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ, ಕಟ್ಟಡದ ಒಂದು ಗೋಡೆ ಕುಸಿದಿದೆ ಎಂದ ಮಾತ್ರಕ್ಕೇ ಇಡೀ ಕಟ್ಟಡ ಸುರಕ್ಷಿತವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಕಟ್ಟಡದ ಸ್ವಾಧೀನಪತ್ರವನ್ನು (ಆಕ್ಯುಪೆನ್ಸಿ ಸರ್ಟಿಫಿಕೇಟ್‌) ಹಿಂಪಡೆಯಲಾಗಿದ್ದು, ಮಾಲ್‌ ಸಂಪೂರ್ಣ ಬಂದ್ ಆಗಿದೆ. ತನಿಖೆ ನಂತರ ವಿಶ್ವಾಸ ಮೂಡಿದರೆ ಮಾತ್ರ ಸ್ವಾಧೀನಪತ್ರವನ್ನು ನೀಡುತ್ತೇವೆ. ಇಲ್ಲವಾದರೆ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.

ರಚನಾತ್ಮಕವಾಗಿ ಕಟ್ಟಡ ಸುರಕ್ಷಿತ: ಮಂತ್ರಿ ಮಾಲ್ ಆಡಳಿತ ಮಂಡಳಿ ಸ್ಪಷ್ಟನೆ
ಇದೇ ವೇಳೆ ಗೋಡೆ ಕುಸಿತ ಸಂಬಂಧ ವ್ಯಾಪಕ ಚರ್ಚೆಗಳಾಗುತ್ತಿರುವಂತೆಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂತ್ರಿ ಮಾಲ್ ಆಡಳಿತ ಮಂಡಳಿ, ರಚನಾತ್ಮಕವಾಗಿ ಮಾಲ್ ಸುರಕ್ಷಿತವಾಗಿದೆ ಎಂದು ಹೇಳಿದೆ. ಸಂಸ್ಥೆ ತಾಂತ್ರಿಕ ಸಲಹೆಗಾರ ಟಿಎಸ್ ಗುರುರಾಜ್ ಅವರು ಗೋಡೆ ಕುಸಿತದ ಬಗ್ಗೆ ಪರಿಶೀಲನೆ ನಡೆಸಿದ್ದು, ತುಂಬಾ ದಿನಗಳಿಂದ ಎಸಿ ಡೆಕ್ ನಲ್ಲಿ ಉಪ್ಪಿನಂಶದ ನೀರು ಸಂಗ್ರಹವಾದ್ದರಿಂದ ನೀರಿನ ತೇವಾಂಶ ಗೋಡೆಯೊಳಗೆ ಸೇರಿ ಗೋಡೆ ಕುಸಿದಿದೆ. ಆದರೆ ಇಡೀ ಕಟ್ಟಡ ಸುರಕ್ಷಿತವಾಗಿದೆ ಎಂದು ಹೇಳಿಕೆ ನೀಡಿದೆ.

ಮಾಲೀಕರ ವಿರುದ್ಧ ಎಫ್‌ಐಆರ್‌

ಮಂತ್ರಿ ಸ್ಕ್ವೇರ್‌ ಗೋಡೆ ಕುಸಿತ  ಪ್ರಕರಣ ಸಂಬಂಧ ನಿರ್ಲಕ್ಷ್ಯದ ಆರೋಪದಡಿ ಮಾಲೀಕರ ವಿರುದ್ಧ ಮಲ್ಲೇಶ್ವರ ಪೊಲೀಸರು ಮಂಗಳವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ‘ಈಗ ನಿರ್ಲಕ್ಷ್ಯದ ಆರೋಪದಡಿ (ಐಪಿಸಿ 337) ಮಾಲ್‌ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗೋಡೆ ಕುಸಿತಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವರದಿ ಸಲ್ಲಿಸಿದ ಬಳಿಕ, ಘಟನೆಗೆ ಕಾರಣ ಯಾರೆಂಬುದು ತಿಳಿಯಲಿದೆ. ಬಳಿಕ ಕಟ್ಟಡ ಗುತ್ತಿಗೆದಾರರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸುತ್ತೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿ ಅನುಮೋದನೆ ಬಳಿಕ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿರುವ ಮಾಲ್ ಗಳು
ಇನ್ನು ಮಂತ್ರಿ ಮಾಲ್ ಗೋಡೆ ಕುಸಿತದ ಬೆನ್ನಲ್ಲೇ ನಗರದ ಹಲವು ಮಾಲ್ ಗಳು ಬಿಬಿಎಂಪಿ ಅನುಮೋದನೆ ಬಳಿಕ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿವೆ ಎಂದು ಅಗ್ನಿಶಾಮಕ ದಳದ ಉಪ ನಿರ್ದೇಶಕ ಎನ್ ಆರ್ ಮಾರ್ಕಂಡೇಯ ಅವರು ಹೇಳಿದ್ದಾರೆ. ಮಾಲ್ ಗಳ ಅಕ್ರಮಗಳ ಕುರಿತು ಇಲಾಖೆಗೆ ಸಾಕಷ್ಟು ದೂರುಗಳು ಬರುತ್ತಿವೆ. ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲ್ ಗಳಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿ ತಪ್ಪು ಸರಿಪಡಿಸಿಕೊಳ್ಳುವಂತೆಯೂ ಹೇಳಿದ್ದೇವೆ. ನಾವೇನೂ ಬಿಲ್ಡರ್ ಗಳ ವಿರೋಧಿಗಳಲ್ಲ. ಹಾಗೆಂದ ಮಾತ್ರಕ್ಕೆ ಸುರಕ್ಷತೆಯನ್ನು ನಗಣ್ಯ ಮಾಡುವುದಿಲ್ಲ. ಸುರಕ್ಷತೆಗೆ ಎಲ್ಲ ಮಾಲ್ ಗಳೂ ಪ್ರಮುಖ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಪ್ರಸ್ತುತ ಮಂತ್ರಿ ಮಾಲ್ ಗೋಡೆ ಕುಸಿತ ಪ್ರಕರಣ ನಮ್ಮ ಇಲಾಖೆ ಅಧೀನಕ್ಕೆ ಬರುವುದಿಲ್ಲ. ಬಿಬಿಎಂಪಿ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದೆ. ಹೀಗಾಗಿ ಅದರಲ್ಲಿ ತಲೆ ಹಾಕುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com