ನೈರ್ಮಲ್ಯ ಕಾಪಾಡುವಲ್ಲಿ ವಿಫಲ: ಚಿತ್ರಕಲಾ ಪರಿಷತ್'ಗೆ ರು.5 ಲಕ್ಷ ದಂಡ

ಚಿತ್ರಸಂತೆ ಬಳಿಕ ನೈರ್ಮಲ್ಯ ಕಾಪಾಡುವಲ್ಲಿ ಚಿತ್ರಕಲಾ ಪರಿಷತ್ ವಿಫಲವಾಗಿದ್ದರಿಂದಾಗಿ ರು.5 ಲಕ್ಷ ದಂಡ ಕಟ್ಟುವಂತೆ ಕರ್ನಾಟಕ ಚಿತ್ರಕಲಾ ಪರಿಷತ್ ಗೆ ಬಿಬಿಎಂಪಿ ಅಧಿಕಾರಿಗಳು ಬುಧವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿತ್ರಸಂತೆ ಬಳಿಕ ನೈರ್ಮಲ್ಯ ಕಾಪಾಡುವಲ್ಲಿ ಚಿತ್ರಕಲಾ ಪರಿಷತ್ ವಿಫಲವಾಗಿದ್ದರಿಂದಾಗಿ ರು.5 ಲಕ್ಷ ದಂಡ ಕಟ್ಟುವಂತೆ ಕರ್ನಾಟಕ ಚಿತ್ರಕಲಾ ಪರಿಷತ್ ಗೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ನೋಟಿಸ್ ಜಾರಿ ಮಾಡಿದೆ.

ಕಳೆದ ಭಾನುವಾರ ಚಿತ್ರಕಲಾ ಪರಿಷತ್ ಚಿತ್ರಸಂತೆ ನಡೆಸಿತ್ತು. ಚಿತ್ರಸಂತೆಯಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದ ಪರಿಷತ್, ಅದಕ್ಕೆ ತಕ್ಕಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸೂಕ್ತ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಕಸ ವಿಂಗಡಣೆ ಹಾಗೂ ವಿಲೇವಾರಿಯಲ್ಲಿ ಪರಿಷತ್ ನಿರ್ಲಕ್ಷ್ಯ ತೋರಿದೆ. ಹೀಗಾಗಿ ದಂಡ ಕಟ್ಟುವಂತೆ ಬಿಬಿಎಂಪಿ ನೋಟಿಸ್ ನಲ್ಲಿ ಹೇಳಿದೆ ಎಂದು ತಿಳಿದುಬಂದಿದೆ.

ಇನ್ನು ಬಿಬಿಎಂಪಿಯ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಚಿತ್ರಕಲಾ ಪರಿಷತ್ ನ ಅಧ್ಯಕ್ಷ ಬಿ.ಎಲ್. ಶಂಕರ್ ಅವರು, ಬಿಬಿಎಂಪಿ ಮೇಯರ್ ಪದ್ಮಾವತಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಚಿತ್ರಸಂತೆ ಬಳಿಕ ತ್ಯಾಜ್ಯ ವಿಲೇವಾರಿಗಾಗಿ ನಾವು ಖಾಸಗಿ ಗುತ್ತಿಗೆದಾರರನ್ನು ನೇಮಕ ಮಾಡಿಕೊಂಡಿದ್ದವು. ಜನವರಿ 15 ರಂದು ಚಿತ್ರಸಂತೆ ಕಾರ್ಯಕ್ರಮ ಅಂತ್ಯಗೊಂಡ ಬಳಿಕ ನಮ್ಮ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳೇ ಕುಮಾರ ಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಗಾಂಧಿಭವನ ರಸ್ತೆಯಲ್ಲಿ ಕಸವನ್ನು ತೆಗೆದಿದ್ದರು. ಕಸದ ರಾಶಿಯನ್ನು ಸಾಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಆದರೆ, ಗುತ್ತಿಗೆದಾರರು ಕೆಲಸ ಮಾಡುವಲ್ಲಿ ವಿಳಂಬ ಮಾಡಿದ್ದಾರೆ. ಹೀಗಾಗಿ ತ್ಯಾಜ್ಯ ವಿಲೇವಾರಿಯಲ್ಲಿ ತುಸು ವಿಳಂಬವಾಯಿತು. ಆದರೆ, ದಂಡ ವಿಧಿಸುವಂತರ ಅಪರಾಧವನ್ನು ಪರಿಷತ್ ಮಾಡಿಲ್ಲ ಎಂದು ಹೇಳಿದ್ದಾರೆ.

ಕಸ ವಿಲೇವಾರಿ ಕುರಿತಂತೆ ಬಿಬಿಎಂಪಿ ಬಳಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಪಾಲಿಕೆ ಸಹಾಯ ಮಾಡಲು ನಿರಾಕರಿಸಿತ್ತು. ಹೀಗಾಗಿ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ವಿಳಂಬವಾಗಿಯಿತು. ನಾವು ಮಾರ್ಗದರ್ಶನದಂತೆಯೇ ನಡೆದಿದ್ದು, ರು.5 ಲಕ್ಷ ದಂಡವನ್ನೇಕೆ ಬಿಬಿಎಂಪಿ ವಿಧಿಸಿದೆ ಎಂದು ಕೇಳಿದ್ದಾರೆ. ಅಲ್ಲದೆ, ಬಿಬಿಎಂಪಿ ಬಳಿ ಮನವಿ ಮಾಡಿಕೊಂಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಇತರೆ ಕಾರ್ಯಕ್ರಮಗಳಿಗೂ ಇದೇ ರೀತಿಯಾಗಿಯೇ ದಂಡ ವಿಧಿಸಲಾಗಿದೆಯೇ...ಈ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ.

ನೋಟಿಸ್ ಜಾರಿ ಮಾಡಿದ ಬಳಿಕ ಉತ್ತರ ನೀಡಲು ನಮಗೆ 7 ದಿನಗಳ ಕಾಲ ಕಾಲಾವಕಾಶವನ್ನು ನೀಡಲಾಗಿದೆ. ಉತ್ತರ ನೀಡುವುದಕ್ಕೂ ಮುನ್ನವೇ ಬಿಬಿಎಂಪಿ ಮಾಧ್ಯಮಗಳಿಗೇಕೆ ಮಾಹಿತಿ ನೀಡಿತು ಎಂದು ಶಂಕರ್ ಅವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com