
ಹಾಸನ: ಸಿಯಾಚಿನ್'ನಲ್ಲಿದ್ದ ಸೇನಾ ಶಿಬಿರದ ಮೇಲೆ ಕಳೆದ ವರ್ಷ ಹಿಮಪಾತಕ್ಕೆ ಸಂಭವಿಸಿ ಹಾಸನ ತಾಲೂಕಿನ ತೇಜೂರಿನ ಯೋಧ ನಾಗೇಶ್ ಅವರು ಹುತಾತ್ಮರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಹಾಸನದ ಮತ್ತೊಬ್ಬ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡಿಪೋರಾ ಜಿಲ್ಲೆಯ ಗುರೇಜ್ ಸೇನಾ ಶಿಬಿರದ ಬಳಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ಹಾಸನ ಮೂಲದ ಯೋಧ ಸಂದೀಪ್ ಶೆಟ್ಟಿಯವರು ಹುತಾತ್ಮರಾಗಿದ್ದಾರೆ. ಇದರಿಂದ ಕುಟುಂಬ ಹಾಗೂ ಇಡೀ ಗ್ರಾಮದಲ್ಲಿಯೇ ಸ್ಮಶಾನ ಮೌನ ಆವರಿಸಿದೆ.
ದೇವಿಹಳ್ಳಿಯ ಪುಟ್ಟರಾಜು ಮತ್ತು ಗಂಗಮ್ಮ ಎಂಬ ದಂಪತಿಗೆ ಸಂದೀಪ್ ಶೆಟ್ಟಿಯವರು ಏಕೈಕ ಪುತ್ರನಾಗಿದ್ದರು. ಮಗನ ಭವಿಷ್ಯಕ್ಕಾಗಿ ದಂಪತಿಗಳು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು. ಇದೀಗ ಕುಟುಂಬದ ಮುಖ್ಯ ಸ್ತಂಭವೇ ನೆಲಕ್ಕೆ ಉರುಳಿದಂತಾಗಿದೆ.
ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಸಂದೀಪ್ ಶೆಟ್ಟಿಯವರು ಶಿಕ್ಷಕರಾಗುವ ಕನಸು ಕಂಡಿದ್ದರು. ಆದರೆ, ನಂತರ ದಿನಗಳಲ್ಲಿ ಸೇನೆ ಸೇರಲು ನಿಶ್ಚಯಿಸಿ 2010ರಲ್ಲಿ ಸೇನೆ ಸೇರಿದ್ದರು. ಗುಜರಾತ್ ಸೇನಾ ವಲಯದಲ್ಲಿ ಸೇವೆ ಸಲ್ಲಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗವಾಗಿದ್ದರು. ಸೇನೆಗೆ ಸೇದಿದ್ದ 7 ವರ್ಷಗಳಲ್ಲಿ ನಾಲ್ಕು ಬಾರಿಯಷ್ಟೇ ಗ್ರಾಮಕ್ಕೆ ಭೇಟಿ ನೀಡಿದ್ದರು.
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗ್ರಾಮದ ಹಬ್ಬ ಹಿನ್ನಲೆಯಲ್ಲಿ ಗ್ರಾಮದ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸೇನೆಯ ಸೇವೆಗೆ ಹಿಂತಿರುಗಿದ್ದರು. ಏಪ್ರಿಲ್ 22 ಕ್ಕೆ ಸಂದೀಪ್ ಶೆಟ್ಟಿಯವರ ವಿವಾಹವನ್ನು ನಿಗದಿ ಮಾಡಲಾಗಿತ್ತು. ಆದರೆ, ಹಿಮಪಾತ ಸಂಭವಿಸುವ ಎರಡು ದಿನಗಳ ಹಿಂದಷ್ಟೇ ತಮ್ಮ ಪೋಷಕರೊಂದಿಗೆ ಮಾತುಕತೆ ನಡೆಸಿದ್ದರು. ಗ್ರಾಮಕ್ಕೆ ಬಂದ ನಂತರ ಮದುವೆ ಸಿದ್ಧತೆಗಳ ಬಗ್ಗೆ ಮಾತನಾಡುತ್ತೇನೆಂದು ಪೋಷಕರ ಬಳಿ ಹೇಳಿದ್ದರು. ಆದರೆ, ಇದೀಗ ಶವವಾಗಿ ಗ್ರಾಮಕ್ಕೆ ಬರುತ್ತಿರುವುದು ಹೆತ್ತವರಿಗೆ ಹಾಗೂ ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದೆ. ಸಂದೀಪ್ ಶೆಟ್ಟಿಯವರ ಅಗಲಿಕೆಯಿಂದಾಗಿ ಇಡೀ ಗ್ರಾಮವೇ ರೋಧಿಸುತ್ತಿದೆ.
ಸಂದೀಪ್ ಶೆಟ್ಟಿ ಅವರ ಅಗಲಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು, ಈಗಾಗಲೇ ಸಂಬಂಧ ಪಟ್ಟಂತಹ ಅಧಿಕಾರಿಗಳಿಗೊಂದಿಗೆ ಮಾತುಕತೆ ನಡೆಸಿದ್ದೇನೆ. ವಾತಾವರಣ ವೈಪರೀತ್ಯದಿಂದಾಗಿ ಸಂದೀಪ್ ಅವರ ಪಾರ್ಥೀವ ಶರೀರವನ್ನು ಗ್ರಾಮಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಶೀಘ್ರಗತಿಯಲ್ಲಿಯೇ ಪಾರ್ಥೀವ ಶರೀರವನ್ನು ರವಾನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರು ಮಾತನಾಡಿ, ಪಾರ್ಥೀವ ಶರೀರವನ್ನು ರಾಜ್ಯಕ್ಕೆ ಕರೆತಲು ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅಂತ್ಯಕ್ರಿಯೆಗೆ ಜಿಲ್ಲಾ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಥತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
Advertisement