ಯೂಟ್ಯೂಬ್ ನೋಡಿ ಬೈಕ್ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ!

ಖ್ಯಾತ ವಿಡಿಯೋ ಸಾಮಾಜಿಕ ಜಾಲತಾಣ ಯೂಟ್ಯೂಬ್ ನೋಡಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖ್ಯಾತ ವಿಡಿಯೋ ಸಾಮಾಜಿಕ ಜಾಲತಾಣ ಯೂಟ್ಯೂಬ್ ನೋಡಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್  ಗ್ಯಾಂಗ್ ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಗರದ ಪರಪ್ಪನ ಅಗ್ರಹಾರ, ಆಡುಗೋಡಿ, ಕೋರಮಂಗಲ, ಎಲೆಕ್ಟ್ರಾನಿಕ್‌ ಸಿಟಿ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್ ಸೇರಿದಂತೆ ವಿವಿಧೆಡೆ ಹೊಂಚು ಹಾಕಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರ ಪಡೆಯನ್ನು ಪರಪ್ಪನ ಅಗ್ರಹಾರ  ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಳ್ಳರಿಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನೇ ನಡೆಸಿರುವ ಪೊಲೀಸರು ಚಿಂದಿ ಆಯುವವರ ವೇಷಧರಿಸಿ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡಿನ ಪ್ರಭು(21),  ದೊಡ್ಡನಾಗಮಂಗಲದ ಬಿ.ಕಾಂ ವಿದ್ಯಾರ್ಥಿಗಳಾದ ಅರುಣ್ ಸಾಯಿ(21), ಕಾರ್ತಿಕ್ (18) ಹಾಗೂ 17 ವರ್ಷದ ಪಿಯುಸಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಸುಮಾರು ರು.30 ಲಕ್ಷ ಮೌಲ್ಯದ 28 ಬೈಕ್‌ ಗಳನ್ನು ಜಪ್ತಿ ಮಾಡಲಾಗಿದ್ದು, ಕದ್ದ ಬೈಕ್ ಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯೂಟ್ಯೂಬ್‌ ನೋಡಿ ಸಂಚು!
ಹೊರದೇಶಗಳಲ್ಲಿ ಕಳ್ಳರು ಯಾವ ರೀತಿ ವಾಹನಗಳನ್ನು ಕದಿಯುತ್ತಾರೆ ಹಾಗೂ ಅವುಗಳನ್ನು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಳ್ಳತನಕ್ಕೆ ತಂತ್ರ ರೂಪಿಸಿರುವುದು ಈ ಚಾಲಾಕಿಗಳ  ವಿಶೇಷವಾಗಿತ್ತು. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪ್ರಭು, ಆಡುಗೋಡಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ದೊಡ್ಡ ನಾಗಮಂಗಲದಲ್ಲಿ ವಾಸವಾಗಿದ್ದ. ಇತರೆ ಮೂವರು ಆರೋಪಿಗಳೂ ಅದೇ ಪ್ರದೇಶದಲ್ಲಿ  ನೆಲೆಸಿದ್ದರು. ಕೆಲವೇ ದಿನಗಳಲ್ಲಿ ಪರಸ್ಪರರ ನಡುವೆ ಸ್ನೇಹ ಬೆಳೆದಿತ್ತು. ನಂತರ ಗೆಳೆಯರ ಬೈಕ್‌ ಗಳಲ್ಲೇ ವ್ಹೀಲಿಂಗ್ ಹಾಗೂ ಡ್ರ್ಯಾಗ್‌ ರೇಸ್ ಮಾಡುವುದನ್ನು ಕಲಿತು, ರಾತ್ರಿ ಸಮಯದಲ್ಲಿ ಮೋಜಿನ ಸುತ್ತಾಟಕ್ಕೆ ಹೋಗುತ್ತಿದ್ದರು.

ಈ ರೀತಿಯಾಗಿ ವಿಲಾಸಿ ಜೀವನಕ್ಕೆ ಮಾರು ಹೋದ ಆರೋಪಿಗಳಲ್ಲಿ ಐಷಾರಾಮಿ ಬೈಕ್‌ ಗಳ ಮೇಲೆ ಆಸೆ ಹುಟ್ಟಿತ್ತು. ಆದರೆ, ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರಿಂದ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವುದು  ಸುಲಭವಾಗಿರಲಿಲ್ಲ. ಹೀಗಾಗಿ, ಅಡ್ಡದಾರಿ ತುಳಿದ ಆರೋಪಿಗಳು, ಯೂಟ್ಯೂಬ್‌ ನಲ್ಲಿ ಸಿಕ್ಕ ವಿಡಿಯೊಗಳಿಂದ ವಾಹನ ಕಳವು ಮಾಡುವ ವಿಧಾನಗಳನ್ನು ತಿಳಿದುಕೊಂಡು ಕೃತ್ಯ ಪ್ರಾರಂಭಿಸಿದ್ದರು ಎಂದು ಆಗ್ನೇಯ ವಿಭಾಗದ ಡಿಸಿಪಿ  ಬೋರಲಿಂಗಯ್ಯ ಅವರು ಹೇಳಿದ್ದಾರೆ.

ಇದೇ ವೇಳೆ ಬೈಕ್ ಕಳ್ಳತನದ ಕುರಿತು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, "ಕೋರಮಂಗಲ, ಎಲೆಕ್ಟ್ರಾನಿಕ್‌ಸಿಟಿ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್ ಹಾಗೂ ಪರಪ್ಪನ ಅಗ್ರಹಾರ ಸುತ್ತಮುತ್ತಲ ಪೇಯಿಂಗ್ ಗೆಸ್ಟ್  ಕಟ್ಟಡಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳೇ ಹೆಚ್ಚಿದ್ದಾರೆ. ಸಾಮಾನ್ಯವಾಗಿ ಅವರೆಲ್ಲ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ನಿಧಾನವಾಗಿ ಎದ್ದೇಳುತ್ತಾರೆ. ಹೀಗಾಗಿ, ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಬೆಳಗಿನ ಜಾವ 3 ರಿಂದ 6  ಗಂಟೆ ನಡುವೆ ಬೈಕ್ ಕಳ್ಳತನ ಮಾಡುತ್ತಿದ್ದೆವು. ನಾಲ್ಕೂ ಜನ ಬೇರೆ ಬೇರೆ ರಸ್ತೆಗಳಿಗೆ ಹೋಗುತ್ತಿದ್ದೆವು. ಬೈಕ್‌ ನ ಹ್ಯಾಂಡಲ್ ಲಾಕ್ ಮುರಿದು, ಅದರ ಇಗ್ನೇಷನ್ ವೈರ್ ಕತ್ತರಿಸುತ್ತಿದ್ದೆವು. ನಂತರ ವೈರ್ ಡೈರೆಕ್ಟ್ ಮಾಡಿಕೊಂಡು  ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದೆವು. ವಾರಕ್ಕೆ ಒಮ್ಮೆ ಮಾತ್ರ ಕಳವು ಕಾರ್ಯಾಚರಣೆ ನಡೆಸುತ್ತಿದ್ದೆವು. ಆರು ತಿಂಗಳಿನಲ್ಲಿ 50ಕ್ಕೂ ಹೆಚ್ಚು ಬೈಕ್‌ಗಳನ್ನು ಕದ್ದು ಮಾರಿದ್ದೇವೆ" ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಇನ್ನು ಕಳೆದ ಆರು ತಿಂಗಳಿನಿಂದ ಪೊಲೀಸರಿಗೆ ಸಿಗದೆ ಸತಾಯಿಸುತ್ತಿದ್ದ ಕಳ್ಳರನ್ನು ಹಿಡಿಯಲು ಸ್ವತಃ ಪೊಲೀಸರೇ ಚಿಂದಿ ಆಯುವವರ ವೇಷಧರಿಸಿ ಕಳ್ಳರನ್ನು ಬಂಧಿಸಲು ಕಾರ್ಯಾಚರಣೆ ರೂಪಿಸಿದ್ದರು. ಪರಪ್ಪನ ಅಗ್ರಹಾರದಲ್ಲಿ ಕಳ್ಳತನ ಮಾಡುತ್ತಿದ್ದಾಗ ಕಳ್ಳರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com