ಐದು ಕೋಟಿ ಬಹುಮಾನದ ಆಸೆಗೆ 1.3 ಕೋಟಿ ಹಣ ಕಳೆದುಕೊಂಡ "ಹಿರಿಯ ವಿಜ್ಞಾನಿ"!

ಆನ್ ಲೈನ್ ವಂಚನೆ ಕುರಿತಂತೆ ಸಾಕಷ್ಟು ಜಾಗೃತಿ ಹೊರತಾಗಿಯೂ ಓದಿಕೊಂಡಿರುವ ವಿದ್ಯಾವಂತರೇ ಹೆಚ್ಚಾಗೆ ಜಾಲಕ್ಕೆ ಬಲಿಯಾಗುತ್ತಿದ್ದು, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರು ವಂಚಕ ಬೀಸಿದ ಜಾಲಕ್ಕೆ ಬಲಿಯಾಗಿ ಬರೊಬ್ಬರಿ 1.3 ಕೋಟಿ ಹಣ ಕಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನ್ ಲೈನ್ ವಂಚನೆ ಕುರಿತಂತೆ ಸಾಕಷ್ಟು ಜಾಗೃತಿ ಹೊರತಾಗಿಯೂ ಓದಿಕೊಂಡಿರುವ ವಿದ್ಯಾವಂತರೇ ಹೆಚ್ಚಾಗೆ ಜಾಲಕ್ಕೆ ಬಲಿಯಾಗುತ್ತಿದ್ದು, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರು ವಂಚಕ  ಬೀಸಿದ ಜಾಲಕ್ಕೆ ಬಲಿಯಾಗಿ ಬರೊಬ್ಬರಿ 1.3 ಕೋಟಿ ಹಣ ಕಳೆದುಕೊಂಡಿದ್ದಾರೆ.

ಆನ್​ ಲೈನ್ ಕ್ವಿಜ್​ ಸ್ಪರ್ಧೆಯಲ್ಲಿ 5 ಕೋಟಿ ರು. ಬಹುಮಾನ ಬಂದಿದೆ ಎಂಬ ವಂಚಕನ ಮಾತು ನಂಬಿದ ವಿಜ್ಞಾನಿಯೊಬ್ಬರು ಬರೋಬ್ಬರಿ 1.30 ಕೋಟಿ ರು. ಕಳೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ. 2014ರಲ್ಲಿ ಕ್ವಿಜ್  ಸ್ಪರ್ಧೆಯಲ್ಲಿ 5 ಕೋಟಿ ಹಣ ಬಂದಿದೆ ಎಂದು ಹೆಬ್ಬಾಳದ ಜಿಕೆವಿಕೆ ಹಿರಿಯ ಸಿಬ್ಬಂದಿಗಳಾದ ಅಳ್ಳಾಳಸಂದ್ರ ನಿವಾಸಿ ವೇಣುಗೋಪಾಲ್ ಮತ್ತು ರೇವತಿ ದಂಪತಿಗಳನ್ನು ವಂಚಿಸಿದ್ದಾರೆ. ದಂಪತಿಗಳಿಂದ ಎರಡು ವರ್ಷಗಳಿಂದ ಹಂತ  ಹಂತವಾಗಿ ವಂಚಕ ಹಣ ಲಪಟಾಯಿಸಿದ್ದು, ಇದೀಗ ವಂಚನೆ ಬೆಳಕಿಗೆ ಬಂದಿದೆ.

ಗಾಂಧಿ ಕೃಷಿ ವಿವಿಯಲ್ಲಿ ಜೆನೆಟಿಕ್ ವಿಭಾಗದ ಹಿರಿಯ ವಿಜ್ಞಾನಿಯಾಗಿದ್ದ ವೇಣುಗೋಪಾಲ್ ಪತ್ನಿ ರೇವತಿ ಇಂಗ್ಲೆಂಡ್ ಮೂಲದ ವಂಚಕ ಡಾ.ಹೊವರ್ಡ್ ಜೆರ್ರಿ ಎಂಬಾತನ ವಿರುದ್ಧ ಜುಲೈ 11ರಂದು ದೂರು ನೀಡಿದ್ದಾರೆ. 2014  ಜನವರಿಯಲ್ಲಿ ವೇಣುಗೋಪಾಲ್ ಅವರು ಆನ್​ಲೈನ್ ಕ್ವೀಜ್ ಸ್ಪರ್ಧೆಯಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಮೊಬೈಲ್ ನಂಬರ್ ಮತ್ತು ಸ್ವ-ವಿವರ ನಮೂದಿಸಿದ್ದರು. ಮರುದಿನ ಡಾ.ಹೊವರ್ಡ್ ಜೆರ್ರಿ ಎಂಬಾತ ವೇಣುಗೋಪಾಲ್  ಮೊಬೈಲ್​ಗೆ ಕರೆ ಮಾಡಿ ‘ಶೆಲ್ ಆಯಿಲ್ ಕಂಪನಿಯಿಂದ 5 ಕೋಟಿ ರು. ಬಹುಮಾನ ನಿಮಗೆ ಬಂದಿದೆ‘ ಎಂದು ತಿಳಿಸಿದ್ದ.

2 ದಿನಗಳ ಬಳಿಕ ಮತ್ತೆ ಕರೆ ಮಾಡಿದ ಆತ ‘5 ಕೋಟಿ ರು. ಹಣವನ್ನು ಬಾಕ್ಸ್​ನಲ್ಲಿ ತೆಗೆದುಕೊಂಡು ಇಂಗ್ಲೆಂಡ್​ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ. ಇಲ್ಲಿನ ಭದ್ರತಾ ಸಿಬ್ಬಂದಿ ಅಷ್ಟೂ ಹಣವನ್ನು ಜಪ್ತಿ ಮಾಡಿ ತೆರಿಗೆ  ಪಾವತಿಸುವಂತೆ ಸೂಚಿಸಿದ್ದಾರೆ. ನನ್ನ ಬಳಿ ಹಣವಿಲ್ಲ. ತಕ್ಷಣ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದರೆ ತೆರಿಗೆ ಪಾವತಿಸಿ ಹಣದ ಬಾಕ್ಸ್ ಬಿಡಿಸಿಕೊಂಡು ಬರುತ್ತೇನೆ‘ ಎಂದು ನಯವಾಗಿ ಹೇಳಿದ. ಇದನ್ನು ನಂಬಿದ ವಿಜ್ಞಾನಿ  ವೇಣುಗೋಪಾಲ್ ತನ್ನ ಬ್ಯಾಂಕ್ ಖಾತೆಯಿಂದ ವಂಚಕನ ಬ್ಯಾಂಕ್ ಖಾತೆಗೆ ಆನ್​ ಲೈನ್​ನಲ್ಲಿ ಲಕ್ಷಾಂತರ ರು. ಜಮಾ ಮಾಡಿದರು.

ಹಣ ಜಮೆಯಾದ ಕೆಲವೇ ದಿನಗಳಲ್ಲಿ ಖಾತೆಯಿಂದ ಡ್ರಾ ಮಾಡಿಕೊಂಡ ವಂಚಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿದ ವಂಚಕ ಬ್ಲಾಕ್​ಮನಿ ಎಂದು ಆರ್​ಬಿಐ ಅಧಿಕಾರಿಗಳು 5 ಕೋಟಿ ರು.  ಜಪ್ತಿ ಮಾಡಿದರು. ಹೀಗಾಗಿ ಫೋನ್ ಸ್ವಿಚ್ ಆಫ್ ಆಗಿತ್ತು. ಅಲ್ಲಿಂದ ಹಣದ ಬಾಕ್ಸ್ ಬಿಡಿಸಿಕೊಳ್ಳಲು ಆದಾಯ ತೆರಿಗೆ ಪಾವತಿ ಮಾಡಬೇಕಾಗಿದೆ. ಸ್ವಲ್ಪ ಹಣ ಕೊಟ್ಟರೆ ಬಹುಮಾನದ ಹಣ ಬಿಡಿಸಿಕೊಂಡು ಬರುವುದಾಗಿ ವಿಜ್ಞಾನಿಗೆ ಮತ್ತೆ  ಹೇಳಿ ನಂಬಿಸಿದ್ದ. ಈ ಸಲವೂ ವಂಚಕನ ಮಾತುಗಳಿಗೆ ಮರುಳಾದ ವಿಜ್ಞಾನಿ ಮತ್ತೆ ಆತನ ಬ್ಯಾಂಕ್ ಖಾತೆಗೆ ಆನ್​ ಲೈನ್​ನಲ್ಲಿ ಹಣ ರವಾನೆ ಮಾಡಿದ್ದರು.

ಇದಾದ ಬಳಿಕ ದಿನಗಳು ಉರುಳುತ್ತಿದ್ದಂತೆಯೇ ಆತಂಕಕ್ಕೀಡಾದ ವಿಜ್ಞಾನಿ ವೇಣುಗೋಪಾಲ್ ಅವರು ಶಂಕೆಯಿಂದ  ಈ ಎಲ್ಲ ವಿಚಾರವನ್ನು ಪತ್ನಿ ರೇವತಿ ಬಳಿ ಹೇಳಿಕೊಂಡಿದ್ದರು. ಇದೇ ಕೊರಗಿನಲ್ಲಿ 2014ರ ಡಿಸೆಂಬರ್ 3 ರಂದು  ವೇಣುಗೋಪಾಲ್ ಸಾವಿಗೀಡಾಗಿದ್ದರು. ಸ್ವಲ್ಪ ದಿನದ ಬಳಿಕ ವಂಚಕ ಮತ್ತೆ ವಿಜ್ಞಾನಿ ಮೊಬೈಲ್ ​ಗೆ ಕರೆ ಮಾಡಿದ್ದ. ಕರೆ ಸ್ವೀಕರಿಸಿದ ರೇವತಿ, ತನ್ನ ಪತಿ ಸಾವನ್ನಪ್ಪಿರುವ ವಿಚಾರ ತಿಳಿಸಿ ನೋವು ಹಂಚಿ ಕೊಂಡಿದ್ದರು. ಇದನ್ನೇ  ಬಂಡವಾಳ ಮಾಡಿಕೊಂಡ ವಂಚಕ ‘ಬಹುಮಾನದ ಹಣವನ್ನು ನಿಮಗೆ ತಲುಪಿಸುತ್ತೇನೆ‘ ಎಂದು ಹೊಸ ವರಸೆ ಶುರು ಮಾಡಿದ. ಅದನ್ನು ನಂಬಿದ ರೇವತಿಯವರಿಂದಲೂ ಲಕ್ಷಾಂತರ ರು. ಸುಲಿಗೆ ಮಾಡಿದ್ದಾನೆ ಎಂದು ಪೊಲೀಸ್  ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮಾಣಪತ್ರ ಮಾಡಿಸಬೇಕು ಎಂದು ಪತ್ನಿಗೂ ವಂಚನೆ
ಇನ್ನು ವಂಚಕನ ಜಾಲಕ್ಕೆ ಕೇವಲ ವೇಣುಗೋಪಾಲ್ ಅವರು ಮಾತ್ರವಲ್ಲ ಅವರ ಪತ್ನಿ ರೇವತಿ ಅವರೂ ಕೂಡ ಬಿದ್ದಿದ್ದು, ಈ  ಬಗ್ಗೆ ಸ್ವತಃ ಅವರೇ ದೂರಿನಲ್ಲಿ ಹೇಳಿಕೊಂಡಿದ್ದಾರೆ. "ವೇಣುಗೋಪಾಲ್​ ಅವರಿಗೆ ಬಂದಿರುವ 5 ಕೋಟಿ  ರು. ಬಹುಮಾನವನ್ನು ನಿಮ್ಮ(ರೇವತಿ) ಹೆಸರಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರಮಾಣಪತ್ರ ಮಾಡಿಸಬೇಕಾಗಿದೆ. ಇದಕ್ಕಾಗಿ ವಿದೇಶಾಂಗ ಇಲಾಖೆ ಅಧಿಕಾರಿಗಳಿಂದ  ಅನುಮತಿ ಪಡೆಯಬೇಕಾಗಿದೆ. ರೆವಿನ್ಯೂ ಅಧಿಕಾರಿ ಮೂಲಕ ನಿಮಗೆ ಹಣ ಕೊಡಿಸುತ್ತೇನೆ. ಹೀಗೆ ನಾನಾ ಸುಳ್ಳುಗಳನ್ನು ಹೇಳಿ ಆತ ನನ್ನ ಬಳಿಯೂ ಲಕ್ಷಾಂತರ ರು. ಪಡೆದ. ಅಂದಾಜು 1.30 ಕೋಟಿ ರು. ಮೋಸ ಮಾಡಿದ್ದಾನೆ ಎಂದು  ರೇವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅತನಿಗೆ ಹಣ ನೀಡಲು ತಾವು "ಬ್ಯಾಂಕ್​ನಲ್ಲಿ ಕೂಡಿಟ್ಟ ಹಣ, ವಿಮಾ ಪಾಲಿಸಿ ಮೇಲೆ ಸಾಲ ಮಾಡಿ ಒಟ್ಟು 1.30 ಕೋಟಿ ರು. ಕೊಟ್ಟು 5 ಕೋಟಿ ರು.ಗಾಗಿ ಚಾತಕಪಕ್ಷಿಯಂತೆ ಕಾದು ಅದೇ ನೋವಿನಲ್ಲಿ ಪತಿ ಅಸುನೀಗಿದರು. ನನ್ನ  ತಲೆಕೆಡಿಸಿ ನನ್ನಿಂದಲೂ ಹಣ ಪಡೆಯುತ್ತಿದ್ದು, ಇದೀಗ 6.40 ಲಕ್ಷ ರು. ಕೊಟ್ಟರೆ ದೆಹಲಿಯಿಂದ ಬೆಂಗಳೂರಿಗೆ ಬಂದು ಕೊಡುವುದಾಗಿ ಹೇಳುತ್ತಿದ್ದಾನೆ ಎಂದು ರೇವತಿ ಅವರು ಹೇಳಿದ್ದಾರೆ.

ಒಟ್ಟಾರೆ ಆನ್ ಲೈನ್ ವಂಚನೆ ಕುರಿತಂತೆ ಎಷ್ಟೇ ಜಾಗೃತಿ ಮೂಡಿಸಿದರೂ ವಿದ್ಯಾವಂತರೇ ಜಾಲಕ್ಕೆ ಬಲಿಯಾಗುತ್ತಿರುವುದು ಮಾತ್ರ ನಿಜಕ್ಕೂ ಅಚ್ಚರಿ ತರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com