ಬೆಂಗಳೂರು: ಅಂತರಾಷ್ಟ್ರೀಯ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯ ನೇತೃತ್ವವಹಿಸಿದ್ದ ಯು.ಆರ್. ರಾವ್ ಅವರು ಸೋಮವಾರ ವಿಧಿವಶವರಾಗಿದ್ದಾರೆ.
ಹಲವು ದಿನಗಳಿಂದಲೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಯು.ಆರ್. ರಾವ್ ಅವರು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಇಸ್ರೋ ಅಧ್ಯರಾಗಿ ಸೇವೆ ಸಲ್ಲಿಸಿದ್ದ ಯು.ಆರ್. ರಾವ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಹಲವು ಪ್ರಮುಖ ಯೋಜನೆಗಳಿಗೂ ರೂವಾರಿಯಾಗಿದ್ದರು. ವಿದೇಶಿ ವಿಶ್ವವಿದ್ಯಾಲಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರಿಗೆ ಹಲವಾರು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಗೌರವಗಳು ಸಂದಿದ್ದವು.
ಸತೀಶ್ ಧವನ್ ಅವರ ನಂತರ ಇಸ್ರೋ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ರಾವ್ ಅವರು ಜವಾಬ್ದಾರಿ ವಹಿಸಿದ್ದರು. 1984ರಿಂದ 1994ರ ವರೆಗೆ ಇಸ್ರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಾವ್ ಅವರು ತಿರುವನಂತಪುರಂ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಚಾನ್ಸಲರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಕರ್ನಾಟಕ ಉಡುಪಿಯಲ್ಲಿನ ಹಳ್ಳಿಯೊಂದರಲ್ಲಿ ಜನಿಸಿದ್ದ ರಾವ್ ಅವರು, ಎಂಜಿಕೆ ಮೆನನ್, ಸತೀಶ್ ಧವನ್ ಮತ್ತು ವಿಕ್ರಮ್ ಸಾರಾಭಾಯಿ ಅಂಥಹವರ ಜೊತೆಗೆ ಕಾರ್ಯನಿರ್ವಹಿಸಿದ್ದರು. ವಿಕ್ರಂ ಸಾರಾಭಾಯ್ ಮಾರ್ಗದರ್ಶನದಲ್ಲಿ ವಿಶ್ವವಿಕರಣಗಳ ಬಗ್ಗೆ ಅಧ್ಯಯನ ಮಾಡಿದ್ದರು. ಆರ್ಯಭಟದಿಂದ ಮೊದಲುಗೊಂಡ ಮಂಗಳಯಾನದವರೆಗೆ ರಾವ್ ಅವರ ಕೊಡುಗೆ ಅನನ್ಯವಾದದ್ದು ಎಂಬುದನ್ನು ಸ್ಮರಿಸಬಹುದು. ಪ್ರಸಕ್ತ ವರ್ಷದ ಜನವರಿ ತಿಂಗಳಿನಲ್ಲಿ ರಾವ್ ಅವರಿಗೆ ಪದ್ಮ ವಿಭೂಷಣ ಗೌರವ ನೀಡಲಾಗಿತ್ತು.