
ಮಂಗಳೂರು: ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿಗೆ ಸಂಬಂಧಿಸಿದ ಮರಣೋತ್ತರ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಆರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳೆನ್ನಳಾಗಿರುವ ರಾಷ್ಟ್ರ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅವರ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸ್ ಕೈ ಸೇರಿದ್ದು, ವರದಿಯಲ್ಲಿ ಕಾವ್ಯಾಳದ್ದು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ತಂಡ ಮರಣೋತ್ತರ ವರದಿಯನ್ನು ಸ್ವೀಕರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಎಸಿಪಿ ನೇತೃತ್ವದ ತನಿಖಾ ತಂಡವು ಕೂಲಂಕುಷ ಪರಿಶೀಲನೆ ನಡೆಸುತ್ತಿದೆ ಎಂದು ವರದಿ ಮಾಡಿದೆ.
ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಪೂಜಾರಿ ಎಂಬವರ ಪುತ್ರಿಯಾಗಿದ್ದ ಕಾವ್ಯಾ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯಾಗಿದ್ದರು. ಉತ್ತಮ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಕಾವ್ಯಾ ಇದೇ ಜುಲೈ 20ರಂದು ರಾತ್ರಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದರು. ಕೊರಳಿಗೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಾವ್ಯಾ ಶವ ಪತ್ತೆಯಾಗಿತ್ತು.
ಇನ್ನು ಕಾವ್ಯಾಳದ್ದು ಆತ್ಮಹತ್ಯೆಯಲ್ಲ ಆಕೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತ ಕಾವ್ಯಾಳ ಪೋಷಕರು ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದವು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಘಟನೆ ಸಂಬಂಧ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತನಿಖೆಗೆ ಆದೇಶಿಸಿದ್ದಾರೆ. ಇದಕ್ಕಾಗಿ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದ್ದು, ಶನಿವಾರ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹಿತ ಆರು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
Advertisement