ಕಪ್ಪು ಬಿಳಿ ದಂಧೆ: ಬೆಂಗಳೂರಿನಲ್ಲಿ 4.27 ಕೋಟಿ ಹಳೇ ನೋಟು ಜಪ್ತಿ, 11 ಮಂದಿ ಬಂಧನ

ಸಿಲಿಕಾನ್ ಸಿಟಿಯಲ್ಲಿ ಕಪ್ಪು ಬಳಿ ದಂಧೆ ಇನ್ನು ಮುಂದುವರಿದಿದ್ದು, ಮಂಗಳವಾರ ಬೆಂಗಳೂರು ಪೊಲೀಸರು ನಡೆಸಿದ ಭರ್ಜರಿ....
ಜಪ್ತಿಯಾದ ಹಳೆ ನೋಟು
ಜಪ್ತಿಯಾದ ಹಳೆ ನೋಟು
Updated on: 
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಪ್ಪು ಬಳಿ ದಂಧೆ ಇನ್ನು ಮುಂದುವರಿದಿದ್ದು, ಮಂಗಳವಾರ ಬೆಂಗಳೂರು ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಿಂದಾಗಿ 11 ಕಪ್ಪು ಕುಳಗಳು ಬಲೆಗೆ ಬಿದ್ದಿವೆ. ಬಂಧಿತರಿಂದ  4 ಕೋಟಿ 27 ಲಕ್ಷ ರುಪಾಯಿ ಮೌಲ್ಯದ ನಿಷೇಧಿತ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು, ವಾಣಿ ವಿಲಾಸ ರಸ್ತೆಯ ಬಳಿ ನಿಷೇಧಿತ 1 ಸಾವಿರ 500 ಮುಖಬೆಲೆಯ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಪ್ರಯತ್ನಿಸುತ್ತಿದ್ದ ಮೊಹ್ಮದ್ ಇಕ್ಬಾಲ್ (40), ರಾಜೇಶ್ (30), ರವೀಂದ್ರನಾಥ್ (44) ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 1 ಸಾವಿರ ಮುಖಬೆಲೆಯ 176 ಕಟ್ಟುಗಳ 1 ಕೋಟಿ 76 ಲಕ್ಷ ಹಾಗೂ 500 ಮುಖಬೆಲೆಯ 99 ಲಕ್ಷ ಸೇರಿ 2 ಕೋಟಿ 15 ಲಕ್ಷ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಿಎಸ್ ಕಾಲೇಜು ರಸ್ತೆಯಲ್ಲಿರುವ ಜಲಮಂಡಲಿ ವಾಟರ್‌ಟ್ಯಾಂಕ್ ಬಳಿ ಹಳೆಯ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದ ಸದಾಶಿವ (38), ಹರ್ಷ (40) ಎಂಬುವರನ್ನು ಬಂಧಿಸಿ 1 ಕೋಟಿ 12 ಲಕ್ಷ ಹಳೆಯ 500 ಹಾಗೂ 1000 ಮುಖ ಬೆಲೆಯ ನೋಟುಗಳು, 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿ ಬಜಾರ್‌ ಮುಖ್ಯರಸ್ತೆಯ ಕಾರಂಜಿ ಪಾರ್ಕ್‌ನ ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಬಳಿ ಹಳೆ ನೋಟು ಬದಲಾಯಿಸುತ್ತಿದ್ದ ಸುರೇಶ್ (32) ಹಾಗೂ ರಘುನಂದನ (34) ಎಂಬುವರನ್ನು ಬಂಧಿಸಿ 50 ಲಕ್ಷ ಮೌಲ್ಯದ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಪುಟ್ಟೇನಹಳ್ಳಿ ಪೊಲೀಸರು ಬಿಓಬಿ ಕಾಲೋನಿಯ ಮಿಲೇನಿಯಮ್ ಅಪಾರ್ಟ್‌ಮೆಂಟ್ ಹಿಂಭಾಗ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹಳೇ ನೋಟು ಹೊಸ ನೋಟಿಗೆ ಬದಲಾವಣೆ ಮಾಡುತ್ತಿದ್ದ ಚಿಕ್ಕಜಾಲದ ಭರತ್ (21), ಉತ್ತರಹಳ್ಳಿಯ ಶ್ರೀನಿವಾಸ (50), ಶಿಢ್ಲಘಟ್ಟದ ಶ್ರೀನಿವಾಸ ಮೂರ್ತಿ (48), ವೇಲೂರಿನ ಚಂದ್ರೇಗೌಡ (31) ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 50 ಲಕ್ಷ ಮೌಲ್ಯದ ಹಳೆಯ ನೋಟುಗಳು, ವೋಕ್ಸ್ ವ್ಯಾಗನ್ ಮಾರುತಿ ವ್ಯಾನ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com