ಬೆಂಗಳೂರಿಗರ ಬೆಚ್ಚಿ ಬೀಳಿಸಿದ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ!
ಬೆಂಗಳೂರು: ಹಾಸನದಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾದ ಕುರಿತು ವರದಿಗಳು ಪ್ರಸಾರವಾದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಹಲವೆಡೆ ಪ್ಲಾಸ್ಟಿಕ್ ಅಕ್ಕಿ ಹಾಗೂ ಪ್ಲಾಸ್ಟಿಕ್ ಮೊಟ್ಟೆಗಳು ಪತ್ತೆಯಾಗಿ ಭೀತಿ ಹುಟ್ಟಿಸಿವೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಬೆಂಗಳೂರಿನ ಕನಕಪುರ, ಮಾಗಡಿ, ಆನೇಕಲ್ ಹಾಗೂ ಉಲ್ಲಾಳದಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಉಲ್ಲಾಳದ ಸ್ಥಳೀಯ ನಿವಾಸಿ ಪ್ರದೀಪ್ ಎಂಬುವವರು ರಿಲಯನ್ಸ್ ಮಾರ್ಟ್ ನಲ್ಲಿ ಖರೀದಿಸಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಅದರಿಂದ ಮಾಡಿದ ಅನ್ನವನ್ನು ಉಂಡೆ ಮಾಡಿ ಗೋಡೆಗೆ ಹೊಡೆದರೆ ಬಾಲ್ ರೀತಿಯಲ್ಲಿ ವಾಪಸ್ ಆಗುತ್ತಿದೆ. ಈ ಬಗ್ಗೆ ಮಾರ್ಟ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಂತೆಯೇ ಆನೇಕಲ್ ಸ್ಥಳೀಯ ಅಂಗಡಿಯಲ್ಲಿ ಖರೀದಿಸಿದ ಮೊಟ್ಟೆಗಳಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದ್ದು, ಮೊಟ್ಟೆಯನ್ನು ಒಡೆದಾಗ ಅದರಲ್ಲಿ ಪ್ಲಾಸ್ಟಿಕ್ ಎಳೆ ಕಂಡುಬಂದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ರಾಜ್ಯದ ವಿವಿಧೆಡೆಯಿಂದ ಪ್ಲಾಸ್ಟಿಕ್ ಅಕ್ಕಿಯ ಸಮಸ್ಯೆ ಕಂಡುಬಂದಿದ್ದು, ಜನರಲ್ಲಿ ಆತಂಕ ಮೂಡಿದೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಇಲಾಖೆ, ಜಾರಿ ದಳದ ಉಪಾಯುಕ್ತ ಡಾ.ಹರ್ಷವರ್ಧನ್ ಅವರು, ಈ ಬಗ್ಗೆ ಸಾಕಷ್ಟು ದೂರುಗಳು ನಮಗೂ ಬಂದಿವೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಅಷ್ಟು ಮಾತ್ರವಲ್ಲದೇ ತೆಲಂಗಾಣ, ಪಶ್ಚಿಮ ಬಂಗಾಳದ ಆರೋಗ್ಯಾಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದೇವೆ. ಇದಲ್ಲದೆ ಸರ್ಕಾರಿ ಲ್ಯಾಬ್ ಗಳು ಮಾತ್ರವಲ್ಲದೇ ಖಾಸಗಿ ಲ್ಯಾಬ್ ಗಳನ್ನು ಸಂಪರ್ಕಿಸಲಾಗಿದ್ದು, ಆಹಾರ ಪರೀಕ್ಷೆ ಕುರಿತಂತೆ ಚರ್ಚೆ ನಡೆಸಿದ್ದೇವೆ. ಅಗ್ಗದ ದರದಲ್ಲಿ ಪರೀಕ್ಷೆ ಮಾಡಿಕೊಡುವ ಕುರಿತು ಮನವಿ ಮಾಡಿದ್ದೇವೆ. ಸರ್ಕಾರಿ ಲ್ಯಾಬ್ ಗಳ ಕೊರತೆ ಇದ್ದು, ಹೀಗಾಗಿ ಖಾಸಗಿ ಲ್ಯಾಬ್ ಗಳನ್ನು ಸಂಪರ್ಕಿಸಿದ್ದೇವೆ. ಅಗ್ಗದ ದರದಲ್ಲಿ ಪರೀಕ್ಷೆಗೆ ಒಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಚೀನಾದಲ್ಲಿ ಪತ್ತೆಯಾಗಿದ್ದ ಚೀನಾ ನಿರ್ಮಿತ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ಇದೀಗ ಭಾರತಕ್ಕೂ ಲಗ್ಗೆ ಇಡುವ ಮೂಲಕ ಜನರ ನಿದ್ದೆಗೆಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ