ಬಹು ನಿರೀಕ್ಷಿತ ನಮ್ಮ ಮೆಟ್ರೋ ಮೊದಲ ಹಂತಕ್ಕೆ ಇಂದು ಚಾಲನೆ

ಉದ್ಯಾನ ನಗರಿ ಬೆಂಗಳೂರಿನ ಕನಸಾಗಿದ್ದ ಮೆಟ್ರೋ ಪೂರ್ಣ ಪ್ರಮಾಣದಲ್ಲಿ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಾವಾಗಲಿದ್ದು, ಶನಿವಾರ ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೆಟ್ರೋ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಕನಸಾಗಿದ್ದ ಮೆಟ್ರೋ ಪೂರ್ಣ ಪ್ರಮಾಣದಲ್ಲಿ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಾವಾಗಲಿದ್ದು, ಶನಿವಾರ ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೆಟ್ರೋ ಮೊದಲ ಹಂತಕ್ಕೆ  ಚಾಲನೆ ನೀಡಲಿದ್ದಾರೆ.

ಸಾಕಷ್ಟು ವಿಳಂಬದಿಂದ ಟೀಕೆಗೆ ಗುರಿಯಾಗಿದ್ದ ನಮ್ಮ ಮೆಟ್ರೋ ಇದೀಗ ಲೋಕಾರ್ಪಣೆ ಗೊಳ್ಳುತ್ತಿದ್ದು, ಇಂದು ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಉತ್ತರ–ದಕ್ಷಿಣ ಕಾರಿಡಾರ್ ಮೆಟ್ರೋಗೆ  ಚಾಲನೆ ನೀಡಲಿದ್ದಾರೆ. ಇಂದು ಚಾಲನೆ ನೀಡಲಾಗುತ್ತಿರುವ ಈ ಯೋಜನೆ ಭಾರೀ ವಿಶೇಷತೆ ಪಡೆದುಕೊಂಡಿದ್ದು, ಎಲ್ಲಾ ಭಾಗಗಳಿಂದಲೂ ಸಂಪರ್ಕ ಕಲ್ಪಿಸುವ ಕೆಂಪೇಗೌಡ ಮೆಟ್ರೋ ನಿಲ್ದಾಣ ಭಾರತದ ಅತಿ ದೊಡ್ಡ ಮೆಟ್ರೋ  ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಎಂಆರ್ ಸಿಎಲ್ ಸಿಬ್ಬಂದಿ ಸಾಕ್ಷಿ
ಇನ್ನು ಮೆಟ್ರೋ ಕಾಮಗಾರಿಗಾಗಿ ಸುಮಾರು ವರ್ಷಗಳ ಹಗಲಿರುಳು ಶ್ರಮಿಸಿದ್ದ ಬಿಎಂಆರ್ ಸಿಎಲ್ ಸಿಬ್ಬಂದಿಗಳು ಕೂಡ ಮೆಟ್ರೋ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಸುಮಾರು 600ಕ್ಕೂ  ಹೆಚ್ಚು ಸಿಬ್ಬಂದಿಗಳು  ಕಾರ್ಯಕ್ರಮಕ್ಕೆ ಹಾಜಗಾರುವ ಸಾಧ್ಯತೆ ಇದೆ.

ಈ ಬೃಹತ್ ಕಾರ್ಯಕ್ರಮಕ್ಕಾಗಿ ಸುಮಾರು 2500 ಪೊಲೀಸ್ ಸಿಬ್ಬಂದಿಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದ್ದು, ಪ್ರಣಬ್ ಮುಖರ್ಜಿ ಆಗಮಿಸುವ ಎಚ್ ಎಎಲ್ ವಿಮಾನ ನಿಲ್ದಾಣ ಹಾಗೂ ರಾಷ್ಟ್ರಪತಿಗಳು ಉಳಿದುಕೊಳ್ಳುವ ಹೊಟೆಲ್  ವರೆಗೂ ಈ ಸಿಬ್ಬಂದಿಗಳು ರಕ್ಷಣೆ ಕಲ್ಪಿಸಲಿದ್ದಾರೆ.

ವಾರಾಂತ್ಯವಾದ್ದರಿಂದ ಉದ್ಘಾಟನಾ ಕಾರ್ಯಕ್ರಮ ವಿಧಾನಸೌಧಕ್ಕೆ ಶಿಫ್ಟ್
ಇನ್ನು ಇಂದು ಶನಿವಾರ ವಾರಾಂತ್ಯವಾದ್ದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂದಣಿ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕಾಗಿ ಅಧಿಕಾರಿಗಳು ಉದ್ಧಾಟನಾ ಕಾರ್ಯಕ್ರಮವನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಿದ್ದಾರೆ ಎಂದು  ಹೇಳಲಾಗುತ್ತಿದೆ. ವಿಧಾನಸೌಧದ ಅವರಣದಲ್ಲಿ ಸುಮಾರು 2 ಸಾವಿರ ಮಂದಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಮೆಟ್ರೋ ಉದ್ಘಾಟನೆ ಹಿನ್ನಲೆ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ
ಮೆಟ್ರೋ ಯೋಜನೆಯ ಮೊದಲ ಹಂತದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ವಿಧಾನಸೌಧ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸುರಂಜನ್‌  ರಸ್ತೆ ಜಂಕ್ಷನ್‌ನಿಂದ ಎಎಸ್‌ಸಿ ಸೆಂಟರ್‌, ಟ್ರಿನಿಟಿ ರಸ್ತೆಯ ಚಚ್‌ರ್‍, ಎಂ.ಜಿ.ರಸ್ತೆ, ಡಿಕಸನ್‌ ರಸ್ತೆ, ಕಬ್ಬನ್‌ ರಸ್ತೆ, ರಾಜಭವನ, ಅಲಿ ಆಸ್ಕರ್‌ ರಸ್ತೆ, ಇನ್ಫಿಂಟ್ರಿ ರಸ್ತೆ, ಡಾ.ಬಿ.ಆರ್‌.ಅಂಬೇ ಡ್ಕರ್‌ ವೀಧಿ, ದೇವರಾಜ್‌ ಅರಸ್‌ ರಸ್ತೆಯಲ್ಲಿ  ಎಜಿಎಸ್‌ ಜಂಕ್ಷನ್‌ನಿಂದ ಎಂ.ಎಸ್‌.ಬಿಲ್ಡಿಂಗ್‌ ಸೇರಿದಂತೆ ವಿಧಾನ ಸೌಧ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಜೆ 4ರಿಂದ ರಾತ್ರಿ 8ರ ವರೆಗೆ ನಿಷೇಧಿಸಲಾಗಿದೆ.

ಅಂತೆಯೇ ವಿಕಾಸಸೌಧ ನಿಲುಗಡೆ ಸ್ಥಳದ ಸೆಲ್ಲರ್‌ 1, 3, ವಿಧಾನಸೌಧ ಪಶ್ಚಿಮ ದ್ವಾರದ ಕೆಂಗಲ್‌ ಹನುಮಂತಯ್ಯ ವೃತ್ತದಿಂದ ಡಿಸ್ಪೆನ್ಸರಿ ವರೆಗೆ ಶಾಸಕರು ಮತ್ತು ಸಚಿವರ ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದ ವರದಿಗಾಗಿ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಎಜಿಎಸ್‌ ಕಚೇರಿ ಬಳಿ ಅವಕಾಶ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಎಂ.ಎಸ್‌.ಬಿಲ್ಡಿಂಗ್‌, ಹಳೇ ಕೆಜಿಐಡಿ, ಉಚ್ಛ ನ್ಯಾಯಾ ಲಯ, ಕಬ್ಬನ್‌ ಪಾರ್ಕ್ ಒಳ ಭಾಗ,  ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಬಿಆರ್‌ವಿ ವೃತ್ತದ ರಸ್ತೆಯ ಪಶ್ಚಿಮ ಭಾಗ, ಸ್ವಾತಂತ್ರ್ಯ ಉದ್ಯಾನವನ, ಅರಮನೆ ರಸ್ತೆ, ಸಿಐಡಿ ವೃತ್ತದಿಂದ ಮಹಾರಾಣಿ ಕಾಲೇಜು, ಕಸ್ತೂರಿ ಬಾ, ಹಡ್ಸನ್‌ ವೃತ್ತದಿಂದ ಸಿದ್ಧಲಿಂಗಯ್ಯ  ವೃತ್ತದವರೆಗೆ, ಮ್ಯೂಸಿಯಂ ಆವರಣದಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ವಾಹನಗಳಿಗೆ ಎಲ್‌ಎಚ್‌ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com