ಪ್ರಯಾಣಿಕರಿಗೆ ಮೆಟ್ರೋ ದರ ಏರಿಕೆ ಬಿಸಿ: ಶೇ.10-12ರಷ್ಟು ದರ ಏರಿಕೆ, ನಾಳೆಯಿಂದ ಸಾಧ್ಯತೆ

ಬಹು ನಿರೀಕ್ಷಿತ ನಮ್ಮ ಮೆಟ್ರೋ ರೈಲು ಮೊದಲ ಹಂತ ಉದ್ಘಾಟನೆಗೆ ಸಿದ್ಧವಾದ ಖುಷಿ ಒಂದೆಡೆಯಾದರೆ, ನಾಳೆಯಿಂದ ಪ್ರಯಾಣಿಕರಿಗೆ ರೈಲು ದರ ಏರಿಕೆ ತಟ್ಟಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ರೈಲು ಮೊದಲ ಹಂತ ಉದ್ಘಾಟನೆಗೆ ಸಿದ್ಧವಾದ ಖುಷಿ ಒಂದೆಡೆಯಾದರೆ, ನಾಳೆಯಿಂದ ಪ್ರಯಾಣಿಕರಿಗೆ ರೈಲು ದರ ಏರಿಕೆ ತಟ್ಟಲಿದೆ.

ಹೌದು..‘ನಮ್ಮ ಮೆಟ್ರೊ’ ಮೊದಲ ಹಂತದ ಎಲ್ಲಾ ಮಾರ್ಗಗಳು ಭಾನುವಾರದಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುತ್ತಿರುವ ಬೆನ್ನಲ್ಲೇ ಪ್ರಯಾಣದರವನ್ನು ಶೇಕಡಾ 10ರಷ್ಟು ಹೆಚ್ಚಿಸುವುದಕ್ಕೂ ಬೆಂಗಳೂರು ಮೆಟ್ರೊ ರೈಲು  ನಿಗಮ (ಬಿಎಂಆರ್‌ಸಿಎಲ್‌) ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಹಾಲಿ ಇರುವ ಮೆಟ್ರೋ ರೈಲು ಪ್ರಯಾಣ ದರದಲ್ಲಿ ಶೇ.10 ರಿಂದ 12 ರವರೆಗೂ ದರ ಏರಿಕೆ ಮಾಡಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಬಿಎಂಆರ್ ಸಿಎಲ್  ಅಧಿಕಾರಿಗಳು ತಿಳಿಸಿರುವಂತೆ ಮೆಟ್ರೊ ಕಾರ್ಯಾಚರಣೆಯಿಂದ ಇದುವರೆಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ ಶೇ 10ರಷ್ಟು ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು  ತಿಳಿದುಬಂದಿದೆ.

ದರ ಏರಿಕೆ ಕುರಿತ ಬಿಎಂಆರ್ ಸಿಎಲ್ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅನುಮೋದನಿ ನೀಡಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು, "ಸೂಕ್ತ ಸಮಯದಲ್ಲೇ ಪ್ರಯಾಣದರ ಪರಿಷ್ಕರಣೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಇದು ಹೊರೆಯಾಗದು. 2011ರಲ್ಲಿ ನಿಗದಿಪಡಿಸಿರುವ ದರವೇ ಈಗಲೂ  ಚಾಲ್ತಿಯಲ್ಲಿದೆ. ಈ ಅವಧಿಯಲ್ಲಿ ಕಾರ್ಯಾಚರಣೆ ವೆಚ್ಚದಲ್ಲಿ ಭಾರಿ ಹೆಚ್ಚಳ ಆಗಿದೆ. ರಾಜ್ಯ ಸರ್ಕಾರ ವರ್ಷಕ್ಕೆ ರು.276 ಕೋಟಿಯಷ್ಟು ನಷ್ಟವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರಯಾಣದರ ಹೆಚ್ಚಳ  ಅನಿವಾರ್ಯ ಎಂದು ಹೇಳಿದ್ದಾರೆ.

ನೂತನ ದರ ಏರಿಕೆ ಅನ್ವಯ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಪ್ರಯಾಣದರ ರು. 60 ಇರಲಿದೆ. ಆರಂಭದ ಕೆಲವು ನಿಲ್ದಾಣಗಳ ದರದಲ್ಲಿ  ರು. 2 ರಿಂದ ರು.5ರಷ್ಟು ಹೆಚ್ಚಳ ಆಗಲಿದೆ. ದರ ಹೆಚ್ಚಳದ ಬಳಿಕವೂ ನಿಗಮ ಲಾಭ  ಗಳಿಸದು. ಈ ಲಾಭದ ಉದ್ದೇಶ ನಮ್ಮದಲ್ಲ. ವಾರ್ಷಿಕ ನಷ್ಟದ ಪ್ರಮಾಣವನ್ನು ರು. 276 ಕೋಟಿಯಿಂದ ರು. 150 ಕೋಟಿಗೆ ತಗ್ಗಿಸುವುದಷ್ಟೇ ನಮ್ಮ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತೆಯೇ "ಮೆಟ್ರೊ  ಕಾಮಗಾರಿಗಾಗಿ ಖಾಸಗಿ ಹಣಕಾಸು ಸಂಸ್ಥೆಗಳಿಂದಲೂ ಸಾಲ ಪಡೆಯಲಾಗಿದೆ. ಎರಡನೇ ಹಂತಕ್ಕೂ ಹಣ ಹೊಂದಿಸಬೇಕಾಗಿದೆ. ಭೂಸ್ವಾಧೀನದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವುದಿಲ್ಲ. ಹಾಗಾಗಿ ಮೆಟ್ರೊವನ್ನು ಲಾಭದ  ಹಾದಿಗೆ ತರಲು ರಾಜ್ಯ ಸರ್ಕಾರವೇ ದಾರಿ ಕಂಡುಕೊಳ್ಳಬೇಕು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಯಾಣ ದರ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ, "ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. 2011ರಿಂದ 2017ರ ಮಾರ್ಚ್‌ವರೆಗೆ ನಿಗಮವು ರು. 340  ಕೋಟಿ ನಷ್ಟ ಅನುಭವಿಸಿದೆ. ಸದ್ಯ ನಮ್ಮ ನಿತ್ಯದ ಸರಾಸರಿ ಆದಾಯ ರು. 35 ಲಕ್ಷ. ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾದ ಬಳಿಕ ಪ್ರತಿದಿನ ಸುಮಾರು 5 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ.  ಆಗ ದೈನಂದಿನ ಗಳಿಕೆ ರು.1 ಕೋಟಿಗೆ ಏರಲಿದೆ" ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com