ನಿರ್ಲಕ್ಷ್ಯ ಬೇಡ, ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ನಿಯಮ ಪಾಲಿಸಿ: ಪ್ರವಾಸಿಗರಿಗೆ ಅರಣ್ಯ ಪ್ರಿಯರಿಗೆ ಎಚ್ಚರಿಕೆ

ರಜೆಯ ಮಜಾ ಸವಿಯುವ ಸಲುವಾಗಿ ಪ್ರವಾಸಿಗರು ತೀರಾ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ಇದೇ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಎಚ್ಚರಿಗೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಜೆಯ ಮಜಾ ಸವಿಯುವ ಸಲುವಾಗಿ ಪ್ರವಾಸಿಗರು ತೀರಾ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ಇದೇ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಎಚ್ಚರಿಗೆ ನೀಡಿದ್ದಾರೆ.

ಇದೇ ಭಾನುವಾರ ಬೆಂಗಳೂರು ಹೊರವಲಯದ ತಟ್ಟೆಕೆರೆಯಲ್ಲಿ ಸಂಭವಿಸಿದ ವ್ಯಕ್ತಿ ಮೇಲೆ ಮೊಸಳೆ ದಾಳಿ ಪ್ರಕರಣ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ಈ ಪ್ರಕರಣದ ಹಿನ್ನಲೆಯಲ್ಲಿ ವನ್ಯಜೀವಿ ಕಾರ್ಯಕರ್ತರು ಪ್ರವಾಸಿಗರಿಗೆ  ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂರಕ್ಷಿತಾರಣ್ಯವನ್ನು ಅಕ್ರಮವಾಗಿ ಪ್ರವೇಶ ಮಾಡುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ಇಲಾಖೆ ಹಾಕಿರುವ ಸೂಚನಾ ಫಲಕಗಳನ್ನು ನಿರ್ಲಕ್ಷಿಸಿ ಪ್ರವಾಸಿಗರು ಅರಣ್ಯ ಪ್ರವೇಶ  ಮಾಡುತ್ತಿದ್ದಾರೆ. ಆ ಮೂಲಕ ತಾವಾಗಿಯೇ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ.

ಇದರಿಂದಾಗಿಯೇ ಪ್ರಾಣಿಗಳ ದಾಳಿಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂರಕ್ಷಿತಾರಣ್ಯ ಪ್ರದೇಶವೆಂದರೆ ಕಾಡು ಪ್ರಾಣಿಗಳಿಗಾಗಿಯೇ ಮೀಸಲಿಟ್ಟ ಪ್ರದೇಶ. ಅಲ್ಲಗೆ ಅಕ್ರಮವಾಗಿ ಪ್ರವೇಶ ಮಾಡುವ ಮೂಲಕ ಅಲ್ಲಿನ ಜೀವ  ವೈವಿಧ್ಯಗಳಿಗೆ ತೊಂದರೆ ನೀಡುವುದು ನಮ್ಮ ಮೇಲೆ ನಾವೇ ಅಪಾಯವೆಳೆದುಕೊಂಡಂತೆ. ಇದರಿಂದ ಕೇವಲ ಪ್ರಾಣಿಗಳಿಗಷ್ಟೇ ಅಲ್ಲ ಮನುಷ್ಯರಿಗೂ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ವನ್ಯಮೃಗಗಳು ಮನುಷ್ಯರ ಮೇಲೆ  ದಾಳಿ ಮಾಡುತ್ತವೆ ಎಂದು ವನ್ಯಜೀವಿ ಕಾರ್ಯಕರ್ತ ಜಿ ವೀರೇಶ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ವಾರಾಂತ್ಯದ ದಿನಗಳಲ್ಲಿ ಟೆಕ್ಕಿಗಳು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡುತ್ತಿದ್ದಾರೆ. ನಾನು ಗಮನಿಸಿದಂತೆ ನಾಗರಾಹೊಳೆ, ಬಂಡೀಪುರ, ಕಾವೇರಿ ವನ್ಯಜೀವಿ ಧಾಮ, ಬನ್ನೇರುಘಟ್ಟ,  ಚಿಕ್ಕಮಗಳೂರು, ಕೊಡಗು ಮತ್ತು ಕುದುರೆಮುಖ ಕಾಡುಗಳಲ್ಲಿ ಅಕ್ರಮ ಪ್ರವೇಶದಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಸಾಕಷ್ಟು ಪ್ರವಾಸಿಗರಿಗೆ ಅಲ್ಲಿನ ಸ್ಥಳ ಪರಿಚಯವಿರುವುದಿಲ್ಲ. ಅಲ್ಲಿನ ಪ್ರದೇಶದ ಸೂಕ್ಷ್ಮತೆ ಮತ್ತು  ಅಲ್ಲಿನ ಪ್ರಾಣಿಗಳ ಇರುವಿಕೆಯ ಪರಿಚಯವಿರುವುದಿಲ್ಲ. ಏನೂ ತಿಳಿಯದ ಪ್ರದೇಶಗಳಿಗೆ ಹೋಗಿ ಅಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಅರಣ್ಯ ಪ್ರದೇಶವನ್ನೂ ಕೂಡ ಅವರು ನಗರ ಪ್ರದೇಶ ಎಂಬಂತ ಭಾವಿಸಿ ರಾಜಾರೋಷವಾಗಿ  ತಿರುಗಾಡುತ್ತಿದ್ದಾರೆ. ಇದರಿಂದ ಅಲ್ಲಿನ ವನ್ಯಮೃಗಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಯಾವುದೇ ಜೀವಿ ಕೂಡ ತನ್ನ ವ್ಯಾಪ್ತಿಯ ಭೂಪ್ರದೇಶದ ಅತಿಕ್ರಮವನ್ನು ಸಹಿಸುವುದಿಲ್ಲ. ಹೀಗಾಗಿಯೇ ಅವು ದಾಳಿ ಮಾಡುತ್ತವೆ ಎಂದು  ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನಕಪುರದ ಸ್ಥಳೀಯ ಅರಣ್ಯಾಧಿಕಾರಿ ಚಂದ್ರಾನಾಯಕ್ ಅವರು ಮಾತನಾಡಿದ್ದು, ಅರಣ್ಯ ಅತಿಕ್ರಮ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತಷ್ಟು ಕಠಿಣಗೊಳಿಸಬೇಕು.  ಪ್ರಮುಖವಾಗಿ ಪ್ರವಾಸಿಗರಿಗೆ ಅರಣ್ಯ ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಕಾನೂನಿನ ಪರಿಚಯ ಮಾಡಿಸಬೇಕು ಎಂದು ಹೇಳಿದ್ದಾರೆ.

ಮತ್ತೋರ್ವ ವನ್ಯಜೀವಿ ಕಾರ್ಯಕರ್ತ ಡಿವಿ ಗಿರೀಶ್ ಅವರು ಮಾತನಾಡಿದ್ದು, ಕಾನೂನಿನಲ್ಲಿರುವ ಲೋಪದೋಷಗಳನ್ನು ಮುಂದಿಟ್ಟುಕೊಂಡು ತಪ್ಪಿತಸ್ಥರು ತಪ್ಪಿಸಿಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದ ಅತಿಕ್ರಮ ಪ್ರವೇಶಕ್ಕೆ ಕಠಿಣ ಶಿಕ್ಷೆ  ವಿಧಿಸಬೇಕು. ಈಗಿರುವ ಕಾನೂನು ಮತ್ತು ಕಾಯ್ದೆಗಳು ಕಠಿಣವಾಗಿವೆಯಾದರೂ, ಅದರೊಳಗಿರುವ ಲೋಪಗಳನ್ನೇ ಮುಂದಿಟ್ಟುಕೊಂಡು ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಇತರರೂ ಕೂಡ ಇದೇ ತಪ್ಪು  ಮಾಡುವಂತಾಗುತ್ತದೆ. ಹೀಗಾಗಿ ಇಂತಹ ತಪ್ಪು ಮಾಡುವವರನ್ನು ಕಠಿಣವಾಗಿ ಶಿಕ್ಷಿಸಿದರೆ ಇದು ಮತ್ತೊಬ್ಬರಿದೆ ಎಚ್ಚರಿಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com