ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾಕು ನಾಯಿಗಳ ವಾಸನೆಯಿಂದಾಗಿ ಮೊಸಳೆ ದಾಳಿ ಮಾಡಿರಬಹುದು: ಅರಣ್ಯ ಇಲಾಖೆ

ಬೆಂಗಳೂರು ಹೊರವಲಯದ ತಟ್ಟೆಕೆರೆಯಲ್ಲಿ ನಡೆದಿದ್ದ ಮೊಸಳೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ದಾಳಿಗೊಳಗಾದ ವ್ಯಕ್ತಿಯೊಂದಿಗಿದ್ದ ಸಾಕು ನಾಯಿಗಳ ವಾಸನೆ ಹಿಡಿದು ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರು ಹೊರವಲಯದ ತಟ್ಟೆಕೆರೆಯಲ್ಲಿ ನಡೆದಿದ್ದ ಮೊಸಳೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ದಾಳಿಗೊಳಗಾದ ವ್ಯಕ್ತಿಯೊಂದಿಗಿದ್ದ ಸಾಕು  ನಾಯಿಗಳ ವಾಸನೆ ಹಿಡಿದು ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟೆಕೆರೆ ಗ್ರಾಮದ ಬಳಿಯಿರುವ ಕಣಿವೆ ಮಾದಾಪುರ ಕೆರೆಯಲ್ಲಿ ಭಾನುವಾರ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿತ್ತು. ಈ ವೇಳೆ ನಾಗ್ಪುರ ಮೂಲದ  ಇಂದಿರಾನಗರದ ಹಾಲಿ ನಿವಾಸಿ ಮುದಿತ್ ದಂಡವತೆ ಅವರ ಕೈಯನ್ನು ಮೊಸಳೆ ಕಿತ್ತಿ ತಿಂದಿತ್ತು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಸ್ಥಳೀಯ ಅರಣ್ಯಾಧಿಕಾರಿಗಳು ಘಟನೆ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದು,  ವ್ಯಕ್ತಿಯೊಂದಿಗಿದ್ದ ನಾಯಿಗಳ ವಾಸನೆ ಹಿಡಿದು ಮೊಸಳೆ ದಾಳಿ ಮಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದ ಡಿಸಿಎಫ್ ಜಾವೆದ್ ಮುಮ್ತಾಜ್ ಅವರು, ಬಹುಶಃ ವ್ಯಕ್ತಿಯೊಂದಿಗಿದ್ದ ನಾಯಿಗಳಿಗಾಗಿ ಮೊಸಳೆ ಬಂದಿರಬಹುದು. ನಾಯಿಗಳ ವಾಸನೆ ಹಿಡಿದು  ಮೊಸಳೆ ಬಂದಿದ್ದು, ವ್ಯಕ್ತಿ ಮೇಲೆ ದಾಳಿ ಮಾಡಿದೆ. ಇದೊಂದು ಸಂರಕ್ಷಿತಾರಣ್ಯ ಪ್ರದೇಶವಾಗಿದ್ದು, ಯಾರಿಗೂ ಪ್ರವೇಶವಿಲ್ಲ. ಹೀಗಿರುವಾಗ ಈ ಇಬ್ಬರು ಮಾತ್ರ ಅದು ಹೇಗೆ ಅನುಮತಿ ಇಲ್ಲದೇ ಅರಣ್ಯ ಪ್ರವೇಶ ಮಾಡಿದ್ದಾರೆ ಎಂದು  ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ದಾಳಿಯಾದ ತಟ್ಟೆಕೆರೆ ಪ್ರದೇಶ ಸಂರಕ್ಷಿತಾರಣ್ಯ ಪ್ರದೇಶವಾಗಿದೆ. ಇಲ್ಲೇ ಆನೆ ಕಾರಿಡಾರ್ ಕೂಡ ಇದ್ದು, ಈ ಕೆರೆಗೆ ನೀರು ಕುಡಿಯಲು ಆನೆ, ಚಿರತೆ, ಹುಲಿ ಮತ್ತು ಇತರೆ ವನ್ಯ ಮೃಗಗಳು ಆಗಮಿಸುತ್ತವೆ. ನಿಜ ಹೇಳ  ಬೇಕು ಎಂದರೆ ಅಲ್ಲಿಗೆ ಬಂದಿದ್ದ ಆ ಇಬ್ಬರೂ ಅದೃಷ್ಟಶಾಲಿಗಳು..ಆವರು ಆಗಮಿಸಿದ್ದ ವೇಳೆ ಅಲ್ಲಿ ಯಾವುದೇ ಮೃಗಗಳು ಇರಲಿಲ್ಲ ಎಂದು ಹೇಳಿದ್ದಾರೆ.

ಅರಣ್ಯದೊಳಗೆ ನಾಯಿಗಳೊಂದಿಗೆ ಆಗಮಿಸಿದ್ದೇ ಅಚ್ಚರಿ
ಇನ್ನು ಸಂರಕ್ಷಿತಾರಣ್ಯ ಪ್ರದೇಶದೊಳಗೆ ಆ ಇಬ್ಬರು ವ್ಯಕ್ತಿಗಳು ಆಗಮಿಸಿರುವುದು...ಅದೂ ಕೂಡ ನಾಯಿಗಳೊಂದಿಗೆ..ಇದು ನಿಜಕ್ಕೂ ಅಚ್ಚರಿಯ ವಿಚಾರವಾಗಿದೆ. ಇದೊಂದು ಸಂರಕ್ಷಿತಾರಣ್ಯ ಪ್ರದೇಶವಾಗಿದ್ದು, ನೂರಾರು  ಕಾಡುಪ್ರಾಣಿಗಳು ತಿರುಗಾಡುತ್ತಿರುತ್ತವೆ. ಸಾಕು ಪ್ರಾಣಿಗಳ ವಾಸನೆ ಸಿಕ್ಕರೂ ಅವರು ಕ್ಷಣ ಮಾತ್ರದಲ್ಲಿ ದಾಳಿ ಮಾಡುತ್ತವೆ. ಅಂತಹುದರಲ್ಲಿ ಇವರು ನಾಯಿಗಳೊಂದಿಗೆ ಅರಣ್ಯ ಪ್ರವೇಶ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ  ಎಂದು ಜಾವೇದ್ ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಅರಣ್ಯಾಧಿಕಾರಿ ರವಿ ಅವರು ಮಾತನಾಡಿದ್ದು, ಪ್ರತೀ ವಾರಾಂತ್ಯದಲ್ಲಿ ಇಲ್ಲಿಗೆ ಬರುತ್ತಿರುವ ಟೆಕ್ಕಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಅರಣ್ಯದ ಗಡಿಯಲ್ಲಿ ಎಚ್ಚರಿಕೆ ನಾಮಫಲಕಗಳನ್ನು ಹಾಕಿದ್ದರೂ ಅವುಗಳನ್ನು  ನಿರ್ಲಕ್ಷಿಸಿ ಅರಣ್ಯ ಪ್ರವೇಶಿಸುತ್ತಾರೆ. ಇಲಾಖೆಗೆ ಇದೊಂದು ದೊಡ್ಡ ತಲೆನೋವಾಗಿದೆ ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com