ಬೆಂಗಳೂರು: ಮೆಟ್ರೋ ಹಸಿರು ಮಾರ್ಗಕ್ಕೆ ತಾಂತ್ರಿಕ ದೋಷದ ತಲೆನೋವು!

ಮೆಟ್ರೋ ಹಸಿರು ಮಾರ್ಗದಲ್ಲಿ ಪದೇಪದೇ ತಾಂತ್ರಿಕ ದೋಷ ಕಾಣಿಸಿಕೊಂಡು ರೈಲು ಸಂಚಾರ ವ್ಯತ್ಯಯ ಆಗುತ್ತಿದ್ದು, ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ದೊಡ್ಡ ತಲೆನೋವು ಉಂಟು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೆಟ್ರೋ ಹಸಿರು ಮಾರ್ಗದಲ್ಲಿ ಪದೇಪದೇ ತಾಂತ್ರಿಕ ದೋಷ ಕಾಣಿಸಿಕೊಂಡು ರೈಲು ಸಂಚಾರ ವ್ಯತ್ಯಯ ಆಗುತ್ತಿದ್ದು, ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ದೊಡ್ಡ ತಲೆನೋವು ಉಂಟು ಮಾಡಿದೆ.

ಭಾನುವಾರ ಯಲಚೇನಹಳ್ಳಿಯಲ್ಲಿ ಉಂಟಾದ ಸಿಗ್ನಲಿಂಗ್ ಸಮಸ್ಯೆ ಉಂಟಾಗಿ ರೈಲು ಸಂಚಾರ ವ್ಯತ್ಯಯವಾಗಿತ್ತು. ಈ ಹಿನ್ನಲೆಯಲ್ಲಿ ಬಿಎಂಆರ್​ಸಿಎಲ್ ಅಧಿಕಾರಿಗಳು ಈ ಮಾರ್ಗದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಮತ್ತೆ ತಾಂತ್ರಿಕಕ  ದೋಷ ಕಾಣಿಸಿಕೊಳ್ಳದಂತೆ ಗಮನ ಹರಿಸುತ್ತಿದ್ದಾರೆ.

ಬಿಎಂಆರ್ ಸಿಎಲ್ ಮೂಲಗಳ ಪ್ರಕಾರ ಮಾರ್ಗದಲ್ಲಿ ಹಳಿಯ ಕೆಳ ಭಾಗದಲ್ಲಿ ಸಿಗ್ನಲಿಂಗ್ ಸೆನ್ಸರ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದು ರೈಲು ಸಂಚರಿಸುವಾಗ ಪ್ರತಿಕ್ಷಣದ ಮಾಹಿತಿಯನ್ನು ನಿರ್ವಹಣಾ ಕೇಂದ್ರಕ್ಕೆ ರವಾನಿಸುತ್ತದೆ.  ಇದನ್ನು ಆಧರಿಸಿಯೇ ರೈಲು ಇರುವ ಸ್ಥಳ, ಸಂಚರಿಸುತ್ತಿರುವ ವೇಗ ಸೇರಿ ಹಲವು ಮಾಹಿತಿಗಳನ್ನು ತಿಳಿಯಲಾಗುತ್ತದೆ. ಆದರೆ ಸೆನ್ಸರ್ ಸಮಸ್ಯೆ ತಲೆದೋರಿದಾಗ ರೈಲಿನ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲು ಯಲಚೇನಹಳ್ಳಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಸಿಗ್ನಲಿಂಗ್ ಸೇರಿ ಎಲ್ಲ ತಾಂತ್ರಿಕ ಉಪಕರಣಗಳನ್ನು ಪರೀಕ್ಷಿಸುವಂತೆ ನಿಲ್ದಾಣದ ಅಧಿಕಾರಿಗಳಿಗೆ, ಇಂಜಿನಿಯರ್​ಗಳಿಗೆ ಸೂಚಿಸಿರುವುದಾಗಿ ಬಿಎಂಆರ್​ ಸಿಎಲ್ ಹೇಳಿದೆ.

ಇನ್ನು ಇದೇ ಭಾನುವಾರ ಜಯನಗರ ಮೆಟ್ರೋ ನಿಲ್ದಾಣದ ಬಳಿ ಹಸಿರು ಮಾರ್ಗದ ಮೆಟ್ರೋ ರೈಲು ತಾಂತ್ರಿಕ ದೋಷದಿಂದಾಗಿ ನಿಂತ ಪರಿಣಾಮ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಮಧ್ಯಾಹ್ನ 2 ಗಂಟೆಗೆ  ಹೊರಡಬೇಕಿದ್ದ ರೈಲು ಮಾರ್ಗದಲ್ಲಿನ ಸಮಸ್ಯೆಯಿಂದಾಗಿ 3 ಗಂಟೆಗೆ ಹೊರಟಿತ್ತು. ವಾರಾಂತ್ಯ ಮತ್ತು ರಜೆಯಾದ್ದರಿಂದ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಇದೇ ತಾಂತ್ರಿಕ ದೋಷದಿಂದಾಗಿ ರೈಲುಗಳ  ಅಂತರವನ್ನು 10 ನಿಮಿಷಕ್ಕೆ ಏರಿಸಲಾಗಿತ್ತು. ಬಳಿಕ ಸಮಸ್ಯೆ ಬಗೆಹರಿದ ಹಿನ್ನಲೆಯಲ್ಲಿ 8 ನಿಮಿಷಕ್ಕೆ ಇಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com