ಜುಲೈ 10ರೊಳಗೆ ರೇರಾ ಜಾರಿಗೊಳಿಸದಿದ್ದರೆ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

ಬಿಲ್ಡರ್ ಗಳ ಲಾಬಿಗೆ ಮಣಿದಿರುವ ರಾಜ್ಯ ಸರ್ಕಾರದಿಂದ ಉದ್ದೇಶ ಪೂರ್ವಕವಾಗಿಯೇ ರೇರಾ ಕಾಯ್ದೆ ಜಾರಿಗೆ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಲ್ಡರ್ ಗಳ ಲಾಬಿಗೆ ಮಣಿದಿರುವ ರಾಜ್ಯ ಸರ್ಕಾರದಿಂದ ಉದ್ದೇಶ ಪೂರ್ವಕವಾಗಿಯೇ ರೇರಾ ಕಾಯ್ದೆ ಜಾರಿಗೆ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ) ಜಾರಿಗೆ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಜುಲೈ 10ರೊಳಗೆ ಕಾಯ್ದೆ ಜಾರಿಗೆ ನಿಯಮಾವಳಿ ರೂಪಿಸದಿದ್ದರೆ ವಸತಿ  ಸಚಿವರ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ಸುರೇಶ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪಕ್ಷದ ಸಹ ವಕ್ತಾರ ಎಸ್‌. ಪ್ರಕಾಶ್‌ ಹಾಗೂ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  "ರಾಜ್ಯ ಸರ್ಕಾರ ಬಿಲ್ಡರ್‌ ಗಳ ಲಾಬಿಗೆ ಮಣಿದು, ರೇರಾ ಕಾಯ್ದೆ ಜಾರಿಗೆ ಹಿಂದೇಟು ಹಾಕುತ್ತಿದೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟು ಕೇಂದ್ರ ಸರ್ಕಾರ ಈ ಕಾಯ್ದೆ ತಂದಿದ್ದು, ಈ ಕಾಯ್ದೆ ಮೇ 1ರಿಂದ  ಸಮರ್ಪಕವಾಗಿ ಜಾರಿಗೆ ಬರಬೇಕಿತ್ತು. 15 ದಿನಗಳ ಒಳಗೆ ನಿಯಮಗಳನ್ನು ಪ್ರಕಟಿಸುತ್ತೇನೆ ಎಂದು ಮೂರು ತಿಂಗಳ ಹಿಂದೆಯೇ ಸಚಿವ ಕೆ.ಜೆ. ಜಾರ್ಜ್‌ ಹೇಳಿಕೆ ನೀಡಿದ್ದರು. ಆದರೆ, ಈವರೆಗೂ ನಿಯಮ ಪ್ರಕಟವಾಗಿಲ್ಲ" ಎಂದು  ಅವರು ಕಿಡಿಕಾರಿದರು.

"ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಯೋಜನೆಗಳನ್ನು ಕಾಯ್ದೆಯಿಂದ ಹೊರಗಿಡುವ ಹುನ್ನಾರವೂ ನಡೆಯುತ್ತಿದ್ದು, ಹೀಗೆ ಕೈಬಿಟ್ಟರೆ ಈಗಾಗಲೇ ಹಣ ಕೊಟ್ಟವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಅವರೇ ರೇರಾ ಜಾರಿಗೆ ಸೂಚಿಸಿದ್ದಾರೆ. ಆದರೆ, ತಮ್ಮ ಹಿತಚಿಂತಕರಾದ ಬಿಲ್ಡ್ಡರ್‌ಗಳೇ ಸರ್ಕಾರಕ್ಕೆ ಮುಖ್ಯವಾಗಿದ್ದಾರೆ. ಇಂತಹ ಯೋಚನೆ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ರೇರಾ  ಅನುಷ್ಠಾನಗೊಳ್ಳಬೇಕು. ಅಂತೆಯೇ ಜುಲೈ 10ರೊಳಗೆ ರಾಜ್ಯ ಸರ್ಕಾರ ರೇರಾ ಜಾರಿಗೆ ನಿಯಮಾವಳಿ ರೂಪಿಸದಿದ್ದರೆ ಬಿಜೆಪಿ ಪಕ್ಷ ಕಠಿಣ ಹೋರಾಟ ನಡೆಸಲಿದೆ.  ವಸತಿ ಸಚಿವರ ನಿವಾಸದ ಎದುರೂ ಪ್ರತಿಭಟಿಸಲಾಗುವುದು  ಎಂದು ಅವರು ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇಷ್ಟಕ್ಕೂ ಈ ರೇರಾ ಕಾಯ್ದೆಯ ನಿಯಮಾವಳಿಗಳೇನು?
ರೇರಾ ಕಾಯ್ದೆ ಜಾರಿಯಾಗಿದ್ದೇ ಆದರೆ ಬಿಲ್ಡರ್ ಗಳು ತಮ್ಮ ನಿರ್ಮಾಣ ಹಂತದ ಕಟ್ಟಡಗಳನ್ನು 3 ತಿಂಗಳ ಅವಧಿಯೊಳಗೆ ರಿಜಿಸ್ಟರ್ ಮಾಡಿಸಬೇಕು.

ಅಪಾರ್ಟ್‌ಮೆಂಟ್ ನಿರ್ಮಾಣ ಅಥವಾ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದಿರಬೇಕು. ಈ ಬಗ್ಗೆ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕವೇ ಯೋಜನೆಯನ್ನು ಆರಂಭಿಸಬೇಕು.

ಬಿಲ್ಡರ್‌ಗಳು ವಸತಿ ಯೋಜನೆಗಾಗಿ ಗ್ರಾಹಕರಿಂದ ಪಡೆದ ಮೊತ್ತದಲ್ಲಿ  ಶೇ. 70 ರಷ್ಟು ಹಣವನ್ನು ಉದ್ದೇಶಿತ ಯೋಜನೆಯ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬೇಕು, ಆ ಹಣವನ್ನು ಅದೇ ಯೋಜನೆಗೆ ಮಾತ್ರ ಬಳಸಬೇಕು.

ಗ್ರಾಹಕರ ಒಪ್ಪಿಗೆ ಇಲ್ಲದೇ ಉದ್ದೇಶಿತ ಯೋಜನೆಯ ನಕ್ಷೆ ಅಥವಾ ವಿನ್ಯಾಸವನ್ನು ಬದಲಾವಣೆ ಮಾಡುವಂತಿಲ್ಲ. ಗೃಹ ನಿರ್ಮಾಣ ಯೋಜನೆ ವಿಳಂಬವಾದರೆ, ಅಂದರೆ ಒಪ್ಪಂದದ ಪ್ರಕಾರ ನಿಗದಿತ ತಿಂಗಳಲ್ಲಿ ಹಸ್ತಾಂತರ  ಮಾಡದೇ ಹೋದರೆ ಬಿಲ್ಡರ್‌ಗಳು ಗ್ರಾಹಕರ ಹೂಡಿಕೆಯ ಹಣಕ್ಕೆ ಬಡ್ಡಿ ನೀಡಬೇಕು.

ರೇರಾ ಕಾಯ್ದೆಯು 500 ಸ್ಕೇರ್ ಮೀಟರ್ ಗಿಂತಲೂ ಹೆಚ್ಚಾಗಿರುವ ಎಲ್ಲ ವಾಣಿಜ್ಯ ಮತ್ತು ವಸತಿ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಅನ್ವಯವಾಗಲಿದ್ದು, ಇದರಲ್ಲಿ 8 ಆಪಾರ್ಟ್ ಮೆಂಟ್ ಗಳ ಕಟ್ಟಡಗಳು ಕೂಡ ಒಳಗೊಳ್ಳಲಿದೆ.

ನಿಯಮಗಳ ಉಲ್ಲಂಘನೆಯಾಗಿದ್ದರೆ, ಕಟ್ಟಡ ನಿರ್ಮಾಣ ಕಾಮಗಾರಿಯ ಒಟ್ಟಾರೆ ವೆಚ್ಚದ ಶೇ.10 ದಂಡವನ್ನು ಪಾವತಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com