ಯುವ ಮತದಾರರ ಮೇಲೆ ಕಣ್ಣು: ಕಾಲೇಜು ಕ್ಯಾಂಪಸ್ ಗಳಲ್ಲಿ ಪಕ್ಷಗಳ ಪ್ರಚಾರ

ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಮತ ಚಲಾಯಿಸುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರ ಮೇಲೆ ಗಮನ ಕೇಂದ್ರೀಕರಿಸಿದ್ದು,  ಇದಕ್ಕಾಗಿ ಕಾಲೇಜು ಕ್ಯಾಂಪಸ್ ಗಳು ಪಕ್ಷಗಳ ನೆಚ್ಚಿನ ತಾಣವಾಗಿದೆ.
ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಗಳು ಈಗಾಗಲೇ ಕಾಲೇಜು ಕ್ಯಾಂಪಸ್ ಗಳಲ್ಲಿ ಹೆಚ್ಚು ಸಕ್ರಿಯರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 20ರಿಂದ 25 ಲಕ್ಷ ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಬಹುತೇಕರು ಮೊದಲ ಬಾರಿಗೆ ಮುಂದಿನ ವರ್ಷ ಮತ ಚಲಾಯಿಸುವವರು.
ಮುಂದಿನ 15 ದಿನಗಳಲ್ಲಿ ರಾಜ್ಯದ ಪ್ರತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದೆ. ಈ ಮಧ್ಯೆ ರಾಜ್ಯಾದ್ಯಂತ ಯುವಕರಿಗೆ ಸಂಬಂಧಿಸಿದ ಪ್ರಚಾರವನ್ನು ಮುಂದಿನ ಆಗಸ್ಟ್ ತಿಂಗಳಲ್ಲಿ ಆರಂಭಿಸಲು ಬಿಜೆಪಿ ಯುವ ಮೋರ್ಚಾ ಉದ್ದೇಶಿಸಿದೆ. ಪದವಿ ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಉದ್ದೇಶವಾಗಿಟ್ಟುಕೊಂಡು ಈ ಅಭಿಯಾನ ನಡೆಯಲಿದೆ.
ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ, ಬೃಹತ್ ಸಂಖ್ಯೆಯಲ್ಲಿ ಯುವ ಅಭಿಯಾನವನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸಲು ನಾವು ಯೋಜನೆ ಹಾಕಿಕೊಂಡಿದ್ದೇವೆ. ವಿದ್ಯಾರ್ಥಿ ಸ್ನೇಹಿ ಕ್ರಮಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ರಾಜ್ಯದಲ್ಲಿನ ಕಾಲೇಜು ವಿದ್ಯಾರ್ಥಿಗಳನ್ನು ತಲುಪುವುದು ಪಕ್ಷದ ಅಜೆಂಡಾವಾಗಿದೆ. ನಾವು ಕೇವಲ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ 2019ರ ಲೋಕಸಭೆ ಚುನಾವಣೆಯನ್ನು ಕೂಡ ಗಮನದಲ್ಲಿಟ್ಟುಕೊಂಡಿದ್ದೇವೆ ಎನ್ನುತ್ತಾರೆ.
ಇನ್ನು ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗೆ ಸೂಚನೆ ನೀಡಿ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಹರಿಸುವ ಮೂಲಕ ಪಕ್ಷದತ್ತ ವಿದ್ಯಾರ್ಥಿಗಳನ್ನು ಸೆಳೆಯಬೇಕೆಂದು ಹೇಳಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ಮಂಜುನಾಥ್ ಗೌಡ, ರಾಜ್ಯಾದ್ಯಂತ ನಾವು ಈಗಾಗಲೇ 6 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಲ್ಲಾ ಕಡೆ ಅಭಿಯಾನವನ್ನು ಮುಗಿಸಿದ್ದೇವೆ. ಮುಂದಿನ ತಿಂಗಳು ಆ ಜಿಲ್ಲೆಗಳನ್ನು ಕೂಡ ಮುಗಿಸಲಾಗುವುದು. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳು, ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಮಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಮತ್ತು ದೇಶದ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ತೆಗೆದುಕೊಂಡಿರುವ ವಿದ್ಯಾರ್ಥಿ ಸ್ನೇಹಿ ಯೋಜನೆಗಳನ್ನು ನಾವು ಪರಿಚಯಿಸುತ್ತಿದ್ದೇವೆ ಎಂದರು.
ಜೆಡಿಎಸ್ ಕೂಡ ಇದರಿಂದ ಹಿಂದೆ ಬಿದ್ದಿಲ್ಲ. ಜುಲೈ ಮಧ್ಯಭಾಗದಲ್ಲಿ ಜೆಡಿಎಸ್ ನ ವಿದ್ಯಾರ್ಥಿ ಘಟಕಕ್ಕೆ ನೋಂದಣಿ ಕಾರ್ಯ ನಡೆಯಲಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ನೋಂದಣಿ ಮಾಡಿ ತಳಮಟ್ಟ ದಿಂದ ಕೆಲಸ ಮಾಡಲು ಆರಂಭಿಸಿದ್ದೇವೆ ಎನ್ನುತ್ತಾರೆ ಜೆಡಿಎಸ್ ನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆರ್.ಚಂದ್ರಶೇಖರ್.
ಬಿಜೆಪಿಯಲ್ಲಿ ವಾರಕ್ಕೆ 2 ಸಾವಿರ ಯುವ ಕಾರ್ಯಕರ್ತರು ಸೇರ್ಪಡೆ: ಯುವ ಸಮುದಾಯಕ್ಕೆ ಸೇರಲು ಕರೆ ನೀಡಿದ ನಂತರ ಬಿಜೆಪಿಯ ವೆಬ್ ಸೈಟ್ ನಲ್ಲಿ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಬರಹಗಾರರಾಗಿ, ಗ್ರಾಫಿಕ್ ಡಿಸೈನರ್ ಮತ್ತು ವಿಡಿಯೊ ಎಡಿಟರ್ ಆಗಿ ಸಕ್ರಿಯರಾಗಿರುವಂತೆ ಸೂಚಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com