ಮಹಿಳೆಯರ ರಕ್ಷಣೆಗೆ ದೇವರ ಮೊರೆ ಹೋದ ಬೆಂಗಳೂರು ಠಾಣೆಯೊಂದರ ಪೊಲೀಸರು

ಮಹಿಳೆಯರು, ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಪ್ರಕರಣಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಿಳೆಯರು, ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನ ಪೊಲೀಸರಿಗೆ ಸ್ವಾಭಾವಿಕವಾಗಿ ಆತಂಕವನ್ನುಂಟುಮಾಡಿದೆ. 
ಇಲ್ಲಿನ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ, ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ದೇವರೇ, ಮಹಿಳೆಯರನ್ನು ಕಾಪಾಡಪ್ಪಾ ಎಂದು ಬೆಂಗಳೂರಿನ ಪೊಲೀಸರು ಇದೀಗ ದೇವರ ಮೊರೆ ಹೋಗಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ನೀಡುವ ಕಾನೂನು ಬಲಪಡಿಸುವಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಒಂದೆಡೆಯಾದರೆ ಬಾಣಸವಾಡಿಯ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸ್ ಠಾಣೆಯಲ್ಲಿ ಹೋಮ ಮಾಡಿಸಿದ್ದಾರೆ. 
ಕಳೆದ ಜನವರಿ 20ರಂದು ಬಾಣಸವಾಡಿ ಪೊಲೀಸ್ ಇನ್ಸ್ ಪೆಕ್ಟರ್ ಮುನಿಕೃಷ್ಣ ಮತ್ತು ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ವಾಸ್ತು ಪೂಜೆ, ಸುದರ್ಶನ ಹೋಮ ಮತ್ತು ಶತ್ರು ಸಂಹಾರ ಯಾಗ ಮಾಡಿಸಿದರು. ಅದು ಬೆಳಗ್ಗೆ 5 ಗಂಟೆಯಿಂದ 9 ಗಂಟೆಯೊಳಗೆ ಇದು  ನೆರವೇರಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಮುನಿಕೃಷ್ಣ ಇದನ್ನು ನಿರಾಕರಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಲೈಂಗಿಕ ಹಿಂಸೆ ಕೇಸುಗಳು ಇತ್ತೀಚೆಗೆ ದಾಖಲಾಗಿವೆ. ಜನವರಿ 1ರಂದು ಮಧ್ಯರಾತ್ರಿ 2.41ರ ಹೊತ್ತಿಗೆ 6 ಮಂದಿ ಪುರುಷರ ಗುಂಪು ಕಮ್ಮನಹಳ್ಳಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಬರುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ನಂತರ ಎಲ್ಲಾ ಆರು ಮಂದಿಯನ್ನು ಬಂಧಿಸಲಾಗಿತ್ತು.  ಜನವರಿ 13ರಂದು ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ಪುರುಷರು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಬ್ಬರನ್ನು ಬಂಧಿಸಲಾಗಿತ್ತು. 
ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇದು ಮೊದಲ ಸಲವೇನಲ್ಲ. 2015ರಲ್ಲಿ ರಾಷ್ಟ್ರೀಯ ಹೆದ್ದಾರಿ -48ರಲ್ಲಿ   ಪದೇ ಪದೇ ರಸ್ತೆ ಅಪಘಾತವಾಗುತ್ತಿದ್ದರಿಂದ ಬೇಸತ್ತ ಕಲಂಬೆಲ್ಲ ಪೊಲೀಸರು ಪೊಲೀಸ್ ಠಾಣೆಯಲ್ಲಿ ಶಾಂತಿ ಹೋಮ ಮಾಡಿಸಿದ್ದರು.
ವೈಟ್ ಫೀಲ್ಡ್ ನ ಐಟಿ ಕಂಪೆನಿಯೊಂದರಲ್ಲಿ ಆಫೀಸಿನ ಬಾಲ್ಕನಿಯಲ್ಲಿನ ಕೆಫೆಟೇರಿಯಾದಿಂದ 28 ವರ್ಷದ ಯುವಕನೊಬ್ಬ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತರ ನೌಕರರಿಗೆ ಏನೂ ಆಗದಿರಲಿ ಎಂದು ಭಾವಿಸಿ ಕಂಪೆನಿ ಮುಖ್ಯಸ್ಥರು ನಂತರ ಹೋಮ ಮಾಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com