ನೀರಿನ ಬಿಲ್ ಪಾವತಿ ಮಾಡುವಂತೆ ನಾಲ್ಕು ದಿನದಿಂದ ಉಪವಾಸ ಸತ್ಯಾಗ್ರಹ!

ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಪಾವತಿ ಮಾಡುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಿರಿಯ ನಾಗರಿಕರೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಆರಂಭಿಕ ಜಯ ದೊರೆತಿದೆ.
ಸತ್ಯಾಗ್ರಹ ನಿರತ ಮುರಳೀಧರನ್
ಸತ್ಯಾಗ್ರಹ ನಿರತ ಮುರಳೀಧರನ್

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಪಾವತಿ ಮಾಡುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಿರಿಯ ನಾಗರಿಕರೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಆರಂಭಿಕ  ಜಯ ದೊರೆತಿದೆ.

ಬಿಲ್ ಪಾವತಿ ಬಾಕಿ ಉಳಿಸಿಕೊಂಡಿರುವ 21 ಮನೆಗಳ ಪೈಕಿ ಐದು ಮನೆ ಮಾಲೀಕರು ಬಿಲ್ ಪಾವತಿಗೆ ಮುಂದಾಗಿದ್ದು, ಉಳಿದವರೂ ಕೂಡ ಶೀಘ್ರದಲ್ಲೇ ಬಿಲ್ ಪಾವತಿ ಮಾಡಲಿದ್ದಾರೆ ಎಂದು ಮುರಳೀಧರನ್ ವಿಶ್ವಾಸ  ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹಲಸೂರು ಕರೆ ಸಮೀಪದ ಕಲಹಳ್ಳಿ 2ನೇ ಹಂತದಲ್ಲಿರುವ ಬಿಡಿಎ ಅಪಾರ್ಟ್ ಮೆಂಟ್ ನ ಸುಮಾರು 21 ಮನೆಗಳ ನಿವಾಸಿಗಳು 40 ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದು, 2.69 ಲಕ್ಷ ಹಣ  ಪಾವತಿಯಾಗಬೇಕಿದೆ.

ಇದೇ ಕಾರಣಕ್ಕಾಗಿ ಕಳೆದ ಮಾರ್ಚ್ 16ರಂದು 65 ವರ್ಷದ ಆರ್ ಮುರಳೀಧರನ್ ಅವರು ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇಂದಿಗೆ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ  ಕಾಲಿಟ್ಟಿದ್ದು, ಇದೀಗ ಆಪಾರ್ಟ್ ಮೆಂಟ್ ನ 5 ಮನೆಗಳ ಮಾಲೀಕರು ಮುರಳೀ ಧರನ್ ಅವರ ಸತ್ಯಾಗ್ರಹಕ್ಕೆ ಸೋತು ಬಿಲ್ ಪಾವತಿಗೆ ನಿರ್ಧರಿಸಿದ್ದಾರೆ. ಅದರಂತೆ 2.69 ಲಕ್ಷ ರುಗಳ ಪೈಕಿ ಈಗಾಗಲೇ ಸುಮಾರು 44 ಸಾವಿರ ರು.ಬಿಲ್  ಪಾವತಿ ಹಣ ಮುರಳೀಧರನ್ ಅವರ ಕೈ ಸೇರಿದ್ದು, ಉಳಿದವರೂ ಕೂಡ ಬಿಲ್ ಪಾವತಿ ಮಾಡುವವರೆಗೂ ತಾವು ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮುರಳೀಧರನ್ ಅವರು, ಎಲ್ಲರೂ ಬಿಲ್ ಪಾವತಿ ಮಾಡುವವರೆಗೂ ನಾನು ನನ್ನ ಸತ್ಯಾಗ್ರಹ ಕೈ ಬಿಡುವುದಿಲ್ಲ. ನನ್ನ ಸತ್ಯಾಗ್ರಹಕ್ಕೆ ಇಲ್ಲಿನ ನಿವಾಸಿಗಳು ಕೂಡ ಕೈ ಜೋಡಿಸಿದ್ದಾರೆ. ನಿತ್ಯ ವಾಟ್ಸಪ್ ಮತ್ತು  ದೂರವಾಣಿ ಮೂಲಕ ಹಲವರು ಕರೆ ಮಾಡಿ ನನ್ನನ್ನು ಹುರಿದುಂಬಿಸುತ್ತಾರೆ. ಸಾಲದು ಎಂಬಂತೆ ಇಲ್ಲಿನ ಕೆಲ ಯುವಕರು ರಾತ್ರಿ ವೇಳೆ ನನ್ನ ಟೆಂಟ್ ಗೆ ಆಗಮಿಸಿ ಸೊಳ್ಳೆ ಬತ್ತಿಗಳನ್ನು ಹಚ್ಚುತ್ತಾರೆ. ಇದರಿಂದ ನಾನು ರಾತ್ರಿ ವೇಳೆ  ಸೊಳ್ಳೆ ಕಾಟವಿಲ್ಲದೇ ನಿದ್ರಿಸಬಹುದು. ಅಂತೆಯೇ ನನ್ನೊಂದಿಗೆ ಸ್ಥಳೀಯ ನಿವಾಸಿಗಳು ಕೂಡ ನನ್ನ ಜೊತೆ ಟೆಂಟ್ ನಲ್ಲಿ ಮಲಗುತ್ತಾರೆ. ಹಗಲು ಹೊತ್ತಿನಲ್ಲಿ ನನ್ನ ಬಳಿ ಬರುವ ಹಲವರು ನನಗೆ ಮಜ್ಜಿಗೆ ಹಾಲು ನೀಡುತ್ತಾರೆ.  ಉಪವಾಸದಿಂದ ನನ್ನ  ಆರೋಗ್ಯ ಕೆಡದಿರಲಿ ಎಂಬ ಉದ್ದೇಶದಿಂದ. ಇವರೆಲ್ಲರ ಪ್ರೀತಿಯಿಂದ ನಾನು ಈ ಕೆಲಸದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಎಲ್ಲ ನಿವಾಸಿಗಳು ಖಂಡಿತಾ ಬಿಲ್ ಪಾವತಿ ಮಾಡುತ್ತಾರೆ ಎಂದು  ಮುರಳೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಬಿಲ್ ಪಾವತಿ ಮಾಡದೇ ಸರ್ಕಾರವನ್ನು ಹೇಗೆ ವಂಚಿಸಬೇಕು ಎನ್ನುವ ಮಂದಿಯೊಟ್ಟಿಗೆ ಮುರಳೀಧರನ್ ರಂತಹ ವ್ಯಕ್ತಿಗಳು ಇರುವುದು ನಿಜಕ್ಕೂ ಶ್ಲಾಘನೀಯವೇ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com