

ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಠ ಪ್ರವೇಶ ದರವನ್ನು 200ರು.ಗೆ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಂತೂ ಮಲ್ಟಿಪ್ಲೆಕ್ಸ್ ಗಳ ಮಾಲೀಕರು ಒಪ್ಪಿಗೆ ನೀಡಿದ್ದು, ಗುರುವಾರದಿಂದಲೇ ನೂತನ ದರಗಳು ಜಾರಿಯಾಗಿವೆ.
ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಬಗೆಯ ಚಿತ್ರಮಂದಿರಗಳಲ್ಲಿ ರು.200 ಗರಿಷ್ಠ ಪ್ರವೇಶ ದರ ನಿಗದಿಪಡಿಸಿದ್ದ ರಾಜ್ಯ ಸರ್ಕಾರದ ಆದೇಶ ಗುರುವಾರದಿಂದಲೇ ಜಾರಿಗೊಂಡಿದೆ. ನಗರದ ಬಹುತೇಕ ಚಿತ್ರಮಂದಿರಗಳು ಗುರುವಾರ ಹೊಸ ಪ್ರವೇಶ ದರ ಅನ್ವಯಿಸಿ ಟಿಕೆಟ್ ಮಾರಾಟ ಮಾಡುತ್ತಿವೆ. ರಾಜ್ಯ ಸರ್ಕಾರ ನಿಗದಿ ಪಡಿಸಿದ ಮೂಲ ಗರಿಷ್ಠ ದರ ರು.200 ಹಾಗೂ ಅದರ ಮೇಲೆ ಶೇ.32 ಮನರಂಜನಾ ಮತ್ತು ಇತರೆ ತೆರಿಗೆ ಮೊತ್ತ ಸೇರಿ ಒಟ್ಟಾರೆ ಪ್ರತಿ ಟಿಕೆಟ್ ದರ ರು.264. ಈ ಮೊತ್ತವನ್ನು ಸಂಗ್ರಹಿಸಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.
ಪ್ರಮುಖವಾಗಿ ಗರುಡ ಮಾಲ್, ಮಂತ್ರಿ ಸ್ಕ್ವೇರ್ ಹಾಗೂ ಫೋರಂ ಮಾಲ್ ನಲ್ಲಿರುವ ಐನಾಕ್ಸ್ ಮಲ್ಟಿಪೆಕ್ಸ್ ಚಿತ್ರಮಂದಿರಗಳು ಹಾಗೂ ಒರಾಯನ್, ವೈಷ್ಣವಿ ಹಾಗೂ ಮಾರ್ಕೆಟ್ ಸಿಟಿಯಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಕ್ಲಬ್ ಕ್ಲಾಸ್, ಸಿಲ್ವರ್, ಪ್ರೀಮಿಯರ್ ಕ್ಲಾಸ್ ಗಳಿಗೆ ರು.264 ವಿಧಿಸಿದರೆ, ರಾಯಲ್, ಪ್ಲಾಟಿನಂ ಹಾಗೂ ಗೋಲ್ಡ್ ಕ್ಲಬ್ ಕ್ಲಾಸ್‌ಗಳಿಗೆ ರು.420 ವಿಧಿಸಲಾಗಿತ್ತು. ರಾಜ್ಯ ಸರ್ಕಾರ ಗರಿಷ್ಠ ದರವನ್ನು ಮಂಗಳವಾರವೇ ನಿಗದಿಪಡಿಸಿದ್ದರೂ ಬುಧವಾರ ಕೂಡ ಮನಬಂದಂತೆ ಹಳೆ ದರಗಳನ್ನೇ ವಿಧಿಸಲಾಗುತ್ತಿತ್ತು. ಈ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರದಿಂದ ಮಲ್ಟಿಪ್ಲೆಕ್ಸ್‌ಗಳು ಗುರುವಾರದಿಂದ ಗರಿಷ್ಠ ರು.200 ಟಿಕೆಟ್ ದರದ ಜತೆಗೆ ಶೇ.32 ತೆರಿಗೆ ಸೇರಿದಂತೆ ಪ್ರತಿ ಟಿಕೆಟ್‌ಗೆ ರು.264 ದರ ವಿಧಿಸುತ್ತಿವೆ.
Advertisement