ಬೆಂಗಳೂರಿನಲ್ಲಿ ಮೂವರು ಪಾಕ್​ ಪ್ರಜೆಗಳು ಸೇರಿ ನಾಲ್ವರ ಬಂಧನ

ಕಳೆದ 2 ತಿಂಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ 2 ತಿಂಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ಬಂಧಿತರ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದು, ಎಲ್ಲರೂ ನೇಪಾಳ ಮಾರ್ಗವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬಂಧಿತರನ್ನು ಪಾಕಿಸ್ತಾನ ಮೂಲದ  ಸಮೀರಾ ಅಬ್ದುಲ್​ ರೆಹಮಾನ್​, ಖಾಸಿಬ್​ ಶಂಷುದ್ದೀನ್​, ಕಿರಣ್​ ಗುಲಾಂ ಆಲಿ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಎಲ್ಲರೂ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.

ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಸಿಸಿಬಿ ಎಸಿಪಿ ಜೈ ಮಾರುತಿ ಅವರ ತಂಡ ಕಾರ್ಯಚರಣೆ ನಡೆಸಿ ಪಾಕ್​ ಪ್ರಜೆಗಳನ್ನು ಬಂಧಿಸಿದೆ. ಜತೆಗೆ ಸಿಸಿಬಿ ಪೊಲೀಸರು ಪಾಕ್​ ಪ್ರಜೆಗಳನ್ನು ಬೆಂಗಳೂರಿಗೆ ಕರೆ ತಂದಿದ್ದ  ಕೇರಳದ ಮೊಹಮ್ಮದ್​ ಷಿಹಾಬ್​ ನನ್ನೂ ಸಹ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದೆ. ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ ಪಾಕ್​ ಪ್ರಜೆಗಳು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ​ನಲ್ಲಿ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದರು. ಬೆಂಗಳೂರಿನ ವಿಳಾಸದ ಆಧಾರ್​ ಕಾರ್ಡ್ ಸಹ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹೇಳಿಕೊಂಡಿರುವಂತೆ, ಷಿಹಾಬ್​ ದುಬೈಗೆ ತೆರಳಿದ್ದ ಸಂದರ್ಭದಲ್ಲಿ ಪಾಕಿಸ್ತಾನ​ ಮೂಲದ ಯುವತಿ ಜತೆ ಪ್ರೀತಿಯ ಬಲೆಗೆ ಸಿಲುಕಿದ್ದ. ಇಬ್ಬರ ಪ್ರೀತಿಗೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಕಲಿ  ಪಾಸ್​ ಪೋರ್ಟ್​ ಮತ್ತು ವೀಸಾ ಮೂಲಕ ಯುವತಿಯನ್ನು ನೇಪಾಳ ಮೂಲಕ ಬೆಂಗಳೂರಿಗೆ ಕರೆತಂದಿದ್ದ ಎಂದ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com