ಕೇವಲ ಒಂದು ವಾರದ ಅವಧಿಯಲ್ಲಿ ಬೆಂಗಳೂರು ರಸ್ತೆಗುಂಡಿಗೆ ಮತ್ತೊಂದು ಬಲಿಯಾಗಿದ್ದು, ಭಾನುವಾರ ನಾಯಂಡಹಳ್ಳಿ ಜಂಕ್ಷನ್ ಬಳಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಟ್ರಕ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ನೀಡಿರುವ ಮಾಹಿತಿಯಂತೆ ಕೆಂಗೇರಿ ಮಾರ್ಗವಾಗಿ ಹೋಂಡಾ ಆಕ್ಟೀವಾದಲ್ಲಿ ಮಹಿಳೆ ಮತ್ತು ಯುವಕ ಬರುತ್ತಿದ್ದರು. ಯುವಕ ಗಾಡಿ ಚಲಾಯಿಸುತ್ತಿದ್ದ. ಹಿಂಬದಿಯಲ್ಲಿ ಮಹಿಳೆ ಕುಳಿತಿದ್ದರು. ನಾಯಂಡಹಳ್ಳಿ ಜಂಕ್ಷನ್ ಸಿಗ್ನಲ್ ಬಳಿ ಇದ್ದ ರಸ್ತೆಗುಂಡಿ ತಪ್ಪಿಸಲು ಯುವಕ ಗಾಡಿಯನ್ನು ಪಕ್ಕಕ್ಕೆ ತಿರುಗಿಸಿದ್ದಾನೆ. ಈ ವೇಳೆ ಗಾಡಿ ಕೆಳಕ್ಕೆ ಬಿದ್ದಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಟ್ರಕ್ ನೇರ ಮಹಿಳೆ ಮೇಲೆ ಹರಿದಿದೆ. ಪರಿಣಾಮ ರಕ್ತದ ಮಡುವಿನಲ್ಲಿ ಇದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಡಿ ಚಲಾಯಿಸುತ್ತಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಟರಾಯನಪುರದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಮೃತ ಮಹಿಳೆಯನ್ನು ರಾಧಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರವನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಬಿಎಂಪಿಯಿಂದ 5 ಲಕ್ಷ ಪರಿಹಾರ ಘೋಷಣೆ
ಇದೇ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು, ಮೃತರ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರು.ಗಳನ್ನು ಘೋಷಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಘಟನೆಯಲ್ಲಿ ಬಿಬಿಎಂಪಿಯ ಯಾವುದೇ ನಿರ್ಲಕ್ಷ್ಯವಿಲ್ಲ. ಘಟನೆ ನಡೆದ ಸ್ಥಳದಲ್ಲಿ ಬಿಎಂಆರ್ ಸಿಎಲ್ ಕಾಮಗಾರಿ ನಡೆಸುತ್ತಿದೆ. ಹಾಗೆಂದ ಮಾತ್ರಕ್ಕೆ ಬಿಬಿಎಂಪಿ ಪಾತ್ರವಿಲ್ಲ ಎಂದಲ್ಲ. ಆದರೆ ರಸ್ತೆ ಗುಂಡಿ ಮುಚ್ಚಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಪದೇ ಪದೇ ಮಳೆ ಬರುತ್ತಿರುವುದರಿಂದ ಕಾಮಗಾರಿಗೆ ಅಡಚಣೆಯಾಗಿದೆ ಎಂದು ಹೇಳಿದರು.
ಕಳೆದ ವಾರವಷ್ಟೇ ಮೈಸೂರು ಫ್ಲೈಓವರ್ ಮೇಲಿನ ರಸ್ತೆ ಗುಂಡಿಗೆ ದಂಪತಿ ಬಲಿಯಾಗಿದ್ದ.