ದಾಮೋದರನ್'ಗೆ ವಿವಾಹವಾಗಿದ್ದು, ಕುಟುಂಬ ಸಮೇತ ಕೆ.ಎಸ್ ಗಾರ್ಡನ್ ನಲ್ಲಿ ವಾಸವಿದ್ದ ಆರೋಪಿ ಕಳೆದ 7 ವರ್ಷಗಳಿಂದ ಹೊಸೂರು ಮುಖ್ಯರಸ್ತೆಯಲ್ಲಿರುವ 'ಸೂಪರ್ ಟ್ರಾನ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್' (ಡೆಲ್ ಕಂಪನಿಯ ಟಿಎಫ್'ಟಿ ಮಾನಿಟರ್ ಹಂಚಿಕೆಮತ್ತು ಮಾರಾಟ ಕಂಪನಿ) ಕಂಪನಿಯಲ್ಲಿ ಸ್ಟೋರ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ.
ದಾಮೋದರ್ ಹೃದಯ ಸಂಬಂಧಿ ಕಾಯಿಲೆ ಹಾಗೂ ಆಗಾಗ್ಗೆ ಕಾಣಿಸಿಕೊಳ್ಳುವ ಕೈ ಕಾಲು ನೋವಿನಿಂದ ಬಳಲುತ್ತಿದ್ದ. ಅಲ್ಲದೆ, ಆರ್ಥಿಕವಾಗಿ ತುಸು ಸಂಕಷ್ಟಕ್ಕೆ ಒಳಗಾಗಿದ್ದ. ಹೀಗಾಗಿ ತನ್ನ ಕಷ್ಟ ನಿವಾರಣೆಗಾಗಿ ಜ್ಯೋತಿಷಿ ಮೊರೆ ಹೋಗಿದ್ದ ಸಿದ್ದಾಪುರದ ಮಲ್ಲಿಗೆ ಆಸ್ಪತ್ರೆ ಬಳಿ 7-8 ವರ್ಷಗಳಿಂದ ಜ್ಯೋತಿಷ್ಯ ಹೇಳುವ ಹಾಗೂ ಕೆಲ ರೋಗಗಳಿಂಗ ಗಿಡಮೂಲಿಕೆ ಔಷಧ ನೀಡುತ್ತಿದ್ದ ಕೃಷ್ಣರಾಜು ಎಂಬಾತನನ್ನು ದಾಮೋದರನ್ ಸಂಪರ್ಕಿಸಿದ್ದ.
ದಾಮೋದರನ್ ಕಷ್ಣ ನಿವಾರಣೆಗೆ ಜ್ಯೋತಿಷಿ ನಿಂಬೆಹಣ್ಣು ಮಂತ್ರಿಸಿ ನೀಡಿದ್ದ. ಆಗ್ಗಾಗ್ಗೆ ಜ್ಯೋತಿಷಿ ಬಳಿ ದಾಮೋದರನ್ ಬಂದು ಹೋಗುತ್ತಿದ್ದ. ದಾಮೋದರನ್ ಕೆಲಸ ಮಾಡುವ ಕಂಪನಿ ಹಾಗೂ ಆತನ ವೈಯಕ್ತಿಕ ವಿಚಾರಗಳನ್ನು ಜ್ಯೋತಿಷಿ ಹಾಗೂ ಜ್ಯೋತಿಷಿಗೆ ಪರಿಚಯವಿರುವ ರಾಜೇಂದ್ರ ಬಳಿ ಹೇಳಿಕೊಂಡಿದ್ದ.
ಈ ವೇಳೆ ಜ್ಯೋತಿಷಿ ಆಷಾಢ ಮಾಸ ಕಳೆದ ಮೇಲೆ ಶ್ರಾವಣದಲ್ಲಿ ನಿನಗೆ ಒಳ್ಳೆ ಭವಿಷ್ಯ ಬರುತ್ತದೆ. ಕಳ್ಳತನ ಮಾಡಿದರೆ ಜೀವನದಲ್ಲಿ ಬೇಗ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಿದ್ದಾರೆ.
ಜ್ಯೋತಿಷಿ ಕೃಷ್ಣರಾಜು ಮತ್ತು ಈತನಿಗೆ ಪರಿಚಯಸ್ಥನಾಗಿರುವ ರಾಜೇಂದ್ರ ಇಬ್ಬರು ಸೇರಿ ದಾಮೋದರನ್'ಗೆ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕಳ್ಳತನ ಮಾಡಲು ಐಡಿಯಾ ನೀಡಿದ್ದರು. ಕಂಪನಿಗೆ ಬರುವ ಮಾನಿಟರ್ ಗಳನ್ನು ಮಾರಾಟ ಮಾಡು. ಅದರಿಂದ ಬರುವ ಹಣದಲ್ಲಿ ಮೂವರು ಹಂಚಿಕೊಳ್ಳೋಣ. ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿನ್ನ ಭವಿಷ್ಯವಾಣಿ ನುಡಿಯುತ್ತಿದೆ ಎಂದು ನಿಂಬೆಹಣ್ಣುಗಳನ್ನು ಮಂತ್ರಿಸಿ ದಾಮೋದರನ್ ಗೆ ಕೊಟ್ಟಿದ್ದಾನೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ದಾಮೋದರನ್ ಕಳ್ಳತನ ಮಾಡಲು ನಿರ್ಧರಿಸಿದ್ದಾನೆ.
ಈ ನಡುವೆ ಕಂಪನಿಯ ಬೇಡಿಕೆ ಮೇರೆಗೆ ತಮಿಳುನಾಡಿನ ಪೆರಂಬದೂರಿನಿಂದ ಆ.3 ಹಾಗೂ ಆ.11 ರಂದು 1,000 ಮಾನಿಟರ್ ಗಳನ್ನು ಬ್ಲೂ ಡಾರ್ಟ್ ಕೊರಿಯರ್ ಕಂಪನಿಯ ವಾಹನದಲ್ಲಿ ಕಳುಹಿಸಲಾಗಿತ್ತು. ಆ ಮಾನಿಟರ್ ಗಳನ್ನು ಗೆಳೆಯನ ಮನೆಗೆ ಡೆಲಿವರಿ ಮಾಡಿಸಿದ್ದ ದಾಮೋದರ್, ನಂತರ ಸಹಚರರ ಮೂಲಕ ಎಸ್.ಪಿ ರಸ್ತೆಯ ಅಂಗಡಿಗಳಲ್ಲಿ ಅವುಗಳನ್ನು ಮಾರಾಟ ಮಾಡಿಸಿದ್ದ.
ಮಾನಿಟರ್ ಗಳನ್ನು ಕಳುಹಿಸಿದ ಕೆಲ ದಿನಗಳ ನಂತರ ಡೆಲ್ ಕಂಪನಿಯ ಬಿಲ್ ಪಾವತಿಸುವಂತೆ ಇ-ಮೇಲ್ ಮೂಲಕ ಸೂಪರ್ ಟ್ರಾನ್ ಎಲೆಕ್ಟ್ರಾನಿಕ್ಸ್ ಆಡಳಿತ ಮಂಡಳಿಯನ್ನು ಕೋರಿತ್ತು. ಅದಕ್ಕೆ ಮಾನಿಟರ್ ಗಳೇ ಬಂದಿಲ್ಲ. ಬಿಲ್ ಹೇಗೆ ಕಟ್ಟುವುದು ಎಂದು ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.
ಇದರಿಂದ ಗಾಬರಿಗೊಂಡ ಡೆಲ್ ಕಂಪನಿ ಸಿಬ್ಬಂದಿ ಬ್ಲೂ ಡಾರ್ಟ್ ಮೂಲಕ ಮಾನಿಟರ್ ಗಳನ್ನು ಕಳುಹಿಸಿರುವ ಹಾಗೂ ಸರಕನ್ನು ಸ್ವೀಕರಿಸಿರುವುದಾಗಿ ತಮ್ಮ ಸಿಬ್ಬಂದಿಯೇ ಸಹಿ ಮಾಡಿರುವ ವಿಚಾರವನ್ನು ತಿಳಿಸಿದ್ದರು. ಆ ನಂತರ ಆಡಳಿತ ಮಂಡಳಿಯವರು ಸಿದ್ದಾಪುರ ಠಾಣೆಗೆ ದೂರು ಕೊಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಂಪನಿಯ ಎಲ್ಲಾ ನೌಕರರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ದಾಮೋದರ್ ಮೇಲೆ ಅನುಮಾನಗಳು ಹೆಚ್ಚಾಗಿದೆ. ಇದರಂತೆ ದಾಮೋದರ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.
ಆರೋಪಿ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಗಳನ್ನು ಪೊಲೀಸರು ಬಂಧಕ್ಕೊಳಪಡಿಸಿದ್ದು, 671 ಮಾನಿಟರ್ ಗಳು ಹಾಗೂ ರೂ. 10 ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.