ಸಚಿವ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಪ್ರಕರಣ ಸಂಬಂಧ ಸಿಐಡಿ ಸಲ್ಲಿಸಿದ್ದ ಬಿ-ರಿಪೋರ್ಟ್, ಸಚಿವ ಕೆ.ಜೆಜಾರ್ಜ್, ಎಡಿಬಿಪಿ ಎ.ಎಂ ಪ್ರಸಾದ್ ಹಾಗೂ ಐಜಿಪಿ ಲೋಕಾಯುಕ್ತ ಪ್ರಣಬ್ ಮೊಹಂತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅನುಸರಿಸಿದ್ದ ವಿಳಂಬ ನೀತಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕುಶವಾಗಿ ತನಿಖೆ ನಡೆಸಲಿದೆ ಎಂದು ಸಿಬಿಐ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಬಿ-ರಿಪೋರ್ಟ್ ಸಲ್ಲಿಸಿದ್ದು, ಸಚಿವರು ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವ ಮಾತುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಸಿಬಿಐ ಮರು ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಚೆನ್ನೈ ವಿಭಾಗದ ಸಿಬಿಐ ನಿರ್ದೇಶಕರು ಡಿಜಿಪಿ-ಸಿಐಡಿ ಕಿಶೋರ್ ಚಂದ್ರ ಅವರಿಗೆ ಅಧಿಕೃತ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಬಿ-ರಿಪೋರ್ಟ್ ಸಲ್ಲಿಸಿದ್ದ ಸಿಐಡಿ ಅಧಿಕಾರಿಗಳು ಸಚಿವ ಜಾರ್ಜ್, ಮೊಹಂತಿ ಹಾಗೂ ಪ್ರಸಾತ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸಂಪೂರ್ಣ ವರದಿಯನ್ನು ಸಿಬಿಐಗೆ ನೀಡುವಂತೆ ತಿಳಿಸಿದ್ದರು. ಇದರಂತೆ ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂಧ ಈಗಾಗಲೇ ಎಲ್ಲಾ ರೀತಿಯ ವರದಿಗಳನ್ನು ಸಿಬಿಐಗೆ ಸಲ್ಲಿಸಿದ್ದಾರೆ.
ಮಾಜಿ ಡಿಜಿ ಮತ್ತು ಐಜಿಪಿ ಎಸ್.ಟಿ. ರಮೇಶ್ ಅವರು ಮಾತನಾಡಿ, ಸ್ಥಳೀಯ ಹಾಗೂ ಸಿಐಡಿ ಪೊಲೀಸರ ಬಳಿ ಸಿಬಿಐ ಎಲ್ಲಾ ರೀತಿಯ ದಾಖಲೆ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆರೋಪ ಕೇಳಿಬಂದಿರುವ ಅಧಿಕಾರಿಗಳನ್ನು ಸ್ಥಾನದಿಂದ ತೆಗೆದುಹಾಕಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಸಚಿವರು ಹಾಗೂ ಅಧಿಕಾರಿಗಳನ್ನು ಸ್ಥಾನದಿಂದ ಕೆಳಗಿಳಿಸುವಂತೆ ಸಿಬಿಐ ಸುಪ್ರೀಂಕೋರ್ಟ್ ಬಳಿ ಮನವಿ ಸಲ್ಲಿಸಬಹುದು ಎಂದಿದ್ದಾರೆ.