ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ

ಭಾಷಾಭಿಮಾನ ಬೇಕು, ಅತಿಯಾದ ಉದಾರಿತನ ಬೇಡ; ಕನ್ನಡೇತರರೂ ಕನ್ನಡ ಕಲಿಯಲಿ: ಸಿದ್ದರಾಮಯ್ಯ

ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು.. ಆದರೆ ಅತಿಯಾದ ಉದಾರಿತನ ಇರಬಾರದು.. ರಾಜ್ಯದಲ್ಲಿ ಪರಭಾಷಿಕರೂ ಕೂಡ...
Published on
ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು.. ಆದರೆ ಅತಿಯಾದ ಉದಾರಿತನ ಇರಬಾರದು.. ರಾಜ್ಯದಲ್ಲಿ ಪರಭಾಷಿಕರೂ ಕೂಡ ಕನ್ನಡ ಕಲಿಯುವ ವಾತಾವರಣ ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ 62ನೇ ಕನ್ನಡರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಮುಖ್ಯಮಂತ್ರಿಗಳು, "ಸುದೀರ್ಘ‌ ಇತಿಹಾಸ ಹಾಗೂ ಲಿಪಿಯನ್ನು  ಹೊಂದಿರುವ ಭಾಷೆ ಕನ್ನಡ. ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೊಂದಿರಬೇಕು. ಆದರೆ ಅತಿಯಾದ ಉದಾರಿತನ ಬೇಡ. ಕನ್ನಡೇತರರು ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು. ಯಾವುದೇ ಭಾಷೆಯನ್ನು  ಕಲಿಯಿರಿ. ಆದರೆ ಕನ್ನಡವನ್ನು ಕಲಿಯದೇ ಇರುವುದು ಕನ್ನಡ ನಾಡಿಗೆ ಮಾಡುವ ಅವಮಾನ, ಮೊದಲು ಕನ್ನಡಿಗ ನಂತರ ಭಾರತೀಯ ಎಂಬ ಭಾವನೆ ಪ್ರತಿಯೊಬ್ಬ ಕನ್ನಡಿಗರಲ್ಲಿ ಮೂಡಬೇಕು. ನಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ  ಕನ್ನಡ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
"ಇಂಗ್ಲೀಷ್ ಇಲ್ಲವೆ ಹಿಂದಿ ಭಾಷೆಗೆ ನಮ್ಮ ವಿರೋಧ ಖಂಡಿತಾ ಇಲ್ಲ. ಆದರೆ ಕನ್ನಡದ ಬೆಲೆ ತೆತ್ತು ಬೇರೆ ಭಾಷೆಗಳ ಹೇರಿಕೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಸ್ಥಳೀಯ ಭಾಷೆಯ ಸ್ವಾಯತ್ತತೆ ಉಳಿಸಿಕೊಂಡೇ ಅನ್ಯಭಾಷೆಗಳನ್ನು  ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ. ಇದು ನಮ್ಮ ಸರ್ಕಾರದ ನೀತಿ ಕೂಡ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಶಾಲಾ ಮಟ್ಟದಲ್ಲಿ ಕನ್ನಡ್ಡ ಕಡ್ಡಾಯದ ಕುರಿತು  ಪರೋಕ್ಷ ಮನ್ಸೂಚನೆ ನೀಡಿದ ಸಿದ್ದರಾಮಯ್ಯ ಅವರು, "ಸಂವಿಧಾನದ ಆಶಯದಂತೆ 6ರಿಂದ 14 ವರ್ಷದೊಳಗಿನ ಮಕ್ಕಳ ಒಳಿತಿನ ಬಗ್ಗೆ ಯೋಚಿಸಿ ಸೂಕ್ತ ಕಾನೂನಿನ ಮೂಲಕ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡುವುದು  ರಾಜ್ಯದ ಜವಾಬ್ದಾರಿಯಾಗಿದೆ. ಪ್ರತಿಯೊಂದು ರಾಜ್ಯಭಾಷೆ ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಅನ್ಯಭಾಷೆಯ ಆಧಿಪತ್ಯ ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಓರ್ವ  ಮುಖ್ಯಮಂತ್ರಿಯಾಗಿ, ಕನ್ನಡಕ್ಕೆ ಸಂಬಂಧಿಸಿದಂತೆ ರಾಜಕೀಯ ಲಾಭ-ನಷ್ಟದ ಯೋಚನೆ ಮಾಡದೆ ಕನ್ನಡ ಪ್ರೇಮಿಯಾಗಿ ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ಕನ್ನಡ ಶಾಲೆಯಲ್ಲಿ 2-3 ವಿದ್ಯಾರ್ಥಿಗಳಿದ್ದರೂ ಶಾಲೆ ಮುಚ್ಚದ  ನಿರ್ಧಾರಕ್ಕೆ ಬರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ಪಜ ಹೊಂದುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಹೊಂದುವ ಕುರಿತು ಸಂವಿಧಾನದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಸದನ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಕನ್ನಡ ಸೌರಭ ಅಂತರ್ಜಾಲ ಲೋಕಾರ್ಪಣೆ
ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕನ್ನಡ ಕಲಿಕೆ ಕಡ್ಡಾಯ ಈ ಕಲಿಕೆ ಸುಲಭ ಉಪಾಯ' ಎಂಬ ಧ್ಯೇಯದೊಂದಿಗೆ ಆರಂಭಗೊಳ್ಳುತ್ತಿರುವ ಕನ್ನಡ ಸೌರಭ ಅಂತರ್ಜಾಲವನ್ನು  ಲೋಕಾರ್ಪಣೆಗೊಳಿಸಿದರು.  

ಇಂದಿನ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತಾದರೂ, ಬಿಜೆಪಿಯ ಎಲ್ಲಾ ನಾಯಕರು ಸಾಮೂಹಿಕ ಗೈರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com