ಭಾರಿ ಮಳೆಗೆ ರಾಜಧಾನಿಯಲ್ಲಿ ನಾಲ್ವರ ಸಾವು: 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ಶುಕ್ರವಾರ ಸಂಜೆ ಸುರಿದ ಮಹಾ ಮಳೆಯ ಪರಿಣಾಮ ನಗರದ ವಿವಿಧೆಡೆ ಸಂಭವಿಸಿದ ಅವಘಡಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಭಾರಿ ಮಳೆ
ಬೆಂಗಳೂರಿನಲ್ಲಿ ಭಾರಿ ಮಳೆ
ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಮಹಾ ಮಳೆಯ ಪರಿಣಾಮ ನಗರದ ವಿವಿಧೆಡೆ ಸಂಭವಿಸಿದ ಅವಘಡಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಮಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು,  ಮೃತಪಟ್ಟವರ ಕುಟುಂಬಕ್ಕೆ ನೆರವಾಗಲು ವಾರಸುದಾರರಿಗೆ ತಲಾ 5 ಲಕ್ಷ ರೂ. ಪರಿಹಾರ  ನೀಡುವುದಾಗಿ ಘೋಷಿಸಿದ್ದಾರೆ.
ಇನ್ನು ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನಿನ್ನೆ ಶಿವಾನಂದ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಮಳೆ ನೀರಿನಲ್ಲಿ  ಕೊಚ್ಚಿಹೋಗಿದ್ದ ಯುವಕ ವರುಣ್ ಎಂಬಾತನ ಮೃತದೇಹ ವೈಯಾಲಿ ಕಾವಲ್‌ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ. ಮೃತ  ದೇಹಕ್ಕಾಗಿ ಶೋಧ ನಡೆಸುತ್ತಿದ್ದ ಎನ್ ಡಿಆರ್ ಎಫ್ ಸಿಬ್ಬಂದಿ ಶವವನ್ನು ಪತ್ತೆ ಮಾಡಿ ಹೊರತೆಗೆದಿದ್ದಾರೆ. ಪ್ರಸ್ತುತ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬಳಿಕ  ಸಂಬಂಧಿಕರಿಗೆ ದೇಹ ರವಾನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಜೆಸಿ ರಸ್ತೆಯ ಡಿಸ್ಪೆಂನ್ಸರಿ ರಸ್ತೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಭಾರೀ ಗಾತ್ರ ಮರಬಿದ್ದು ಸುಂಕದಕಟ್ಟೆಯ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ,  ಮೆಕ್ಯಾನಿಕ್ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ತಮ್ಮ ಎಸ್ಟೀಮ್ ಕಾರನ್ನು ರಿಪೇರಿ ಮಾಡಿಸಲು ಬೆಳಗ್ಗೆಯೇ ಆಗಮಿಸಿದ್ದ ಮೂವರು ರಿಪೇರಿ ಬಳಿಕ ರಾತ್ರಿ ಮೆಕ್ಯಾನಿಕ್ ಜತೆ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ಭಾರೀ  ಮಳೆಯಿಂದಾಗಿ ಮರವೊಂದು ನೇರವಾಗಿ ಕಾರಿನ ಹಿಂಬದಿಯಿಂದ ಬಿದ್ದಿದೆ. ತಕ್ಷಣವೇ ನಾಲ್ವರನ್ನು ಕಾರಿನಿಂದ ಹೊರತರಲಾಯಿತಾದರೂ ಅಷ್ಟರಲ್ಲಾಗಲೇ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು  ಸುಮನಹಳ್ಳಿ ನಿವಾಸಿ ರಮೇಶ್(42), ಹೋಂ ಗಾರ್ಡಾಗಿ ಕೆಲಸ ಮಾಡುತ್ತಿದ್ದ ಪತ್ನಿ ಭಾರತಿ (38), ಈಕೆಯ ಅಣ್ಣ ಜಗದೀಶ್(42) ಎಂದು ಗುರುತಿಸಲಾಗಿದೆ. ಇನ್ನು, ಕಾರು ಮೆಕಾನಿಕ್ ಡಿಸ್ಪೆನ್ಸರಿ ರಸ್ತೆ ನಿವಾಸಿ ಅಲಿ (23) ಗಂಭೀರವಾಗಿ  ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ರಿಪೇರಿಗೆ ಬಂದಿದ್ದರು: ಮಾರುತಿ ಎಸ್ಟೀಮ್ ಕಾರು ರಿಪೇರಿ ಮಾಡಿಸಲು ಪತ್ನಿ ಹಾಗೂ ಭಾವ ಅವರೊಂದಿಗೆ ರಮೇಶ್ ಡಿಸ್ಪೆನ್ಸರಿ ರಸ್ತೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ಬಂದಿದ್ದ ಅವರು ರಾತ್ರಿವರೆಗೂ ಅಲ್ಲಿಯೇ ಇದ್ದರು. ರಾತ್ರಿ  7.45ಕ್ಕೆ ದುರಸ್ತಿಗೊಂಡ ಬಳಿಕ ಕಾರನ್ನು ಪರೀಕ್ಷಿಸಲು ಮೆಕಾನಿಕ್ ಅಲಿ, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು, ರಮೇಶ್ ಹಾಗೂ ಇನ್ನಿಬ್ಬರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಸುರಿದ ಗಾಳಿಸಹಿತ ಭಾರಿ ಮಳೆಗೆ ಗ್ಯಾರೇಜ್  ಪಕ್ಕದಲ್ಲಿಯೇ ಇದ್ದ ಮರ ಕಾರಿನ ಹಿಂಭಾಗದ ಮೇಲೆ ಬಿದ್ದಿದೆ. ಅದರಿಂದಾಗಿ ರಮೇಶ್, ಭಾರತಿ ಮತ್ತು ಜಗದೀಶ್ ಮರದ ಕೆಳಗೆ ಸಿಲುಕಿದ್ದರು. ಸ್ಥಳೀಯರು, ಅಗ್ನಿಶಾಮಕದ ದಳದ ಸಿಬ್ಬಂದಿ ಧಾವಿಸಿ, ಮರದ ಕೆಳಗೆ ಸಿಲುಕಿದ್ದವರ ರಕ್ಷಣೆ  ಮಾಡಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಇನ್ನು, ಡ್ರೖೆವಿಂಗ್ ಸೀಟಿನಲ್ಲಿ ಕುಳಿತಿದ್ದ ಅಲಿಯನ್ನು ಮಾತ್ರ ರಕ್ಷಿಸಲಾಗಿದೆ. ರಮೇಶ್ ಹಾಗೂ ಭಾರತಿ ದಂಪತಿ ಪುತ್ರ ರಾಹುಲ್ ಕಾರಿನಲ್ಲಿ ಕುಳಿತುಕೊಳ್ಳದೆ ಹೊರಗೆ  ನಿಂತಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com