ಕ್ಯಾನ್ಸರ್ ಗೆದ್ದಳು, ವಿಧಿಯಾಟ ಗೆಲ್ಲಲಾಗದೇ ಮಳೆಗೆ ಬಲಿಯಾದ ಭಾರತಿ!

ಶುಕ್ರವಾರ ಸುರಿದ ಭಾರಿ ಮಳೆ ಒಂದು ಕುಟುಂಬದ ಆಧಾರ ಸ್ಥಂಬವನ್ನೇ ಬಲಿ ಪಡೆದಿದ್ದು, ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ಕಾಯಿಲೆ ಗೆದ್ದಿದ್ದ ಮಹಿಳೆ ಮಳೆಗೆ ಬಲಿಯಾದ ಧಾರುಣ ಘಟನೆ ಸಂಭವಿಸಿದೆ.
ಮೃತ ಭಾರತಿ, ರಮೇಶ್ ದಂಪತಿ
ಮೃತ ಭಾರತಿ, ರಮೇಶ್ ದಂಪತಿ
ಬೆಂಗಳೂರು: ಶುಕ್ರವಾರ ಸುರಿದ ಭಾರಿ ಮಳೆ ಒಂದು ಕುಟುಂಬದ ಆಧಾರ ಸ್ಥಂಬವನ್ನೇ ಬಲಿ ಪಡೆದಿದ್ದು, ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ಕಾಯಿಲೆ ಗೆದ್ದಿದ್ದ ಮಹಿಳೆ ಮಳೆಗೆ ಬಲಿಯಾದ ಧಾರುಣ ಘಟನೆ ಸಂಭವಿಸಿದೆ.
ನಿನ್ನೆ ಭಾರಿ ಮಳೆಯಿಂದಾಗಿ ಜೆಸಿ ನಗರದ ಡಿಸ್ಪೆಂನ್ಸರಿ ರಸ್ತೆಯಲ್ಲಿ ಮರ ಧರೆಗುರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಬಲಿಯಾಗಿದ್ದರು. ಈ ಪೈಕಿ ದಂಪತಿಗಳು ಹಾಗೂ ಮಹಿಳೆಯ ತಮ್ಮ ಅವಘಡದಲ್ಲಿ ಬಲಿಯಾಗಿದ್ದ.  ಇದೀಗ ಈ ಕುಟುಂಬದ ಮಾಹಿತಿಗಳು ಲಭ್ಯವಾಗಿದ್ದು, ಘಟನೆಯಲ್ಲಿ ಮೃತಪಟ್ಟ ಮಹಿಳೆ ಭಾರತಿ ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ರೋಗದಿಂದ ಮುಕ್ತರಾಗಿ ಸಹಜ ಜೀವನದತ್ತ ಮುಖ ಮಾಡಿದ್ದರಂತೆ. ಆದರೆ ಕ್ಯಾನ್ಸರ್ ಜೊತೆಗಿನ  ಸೆಣಸಾಟದಲ್ಲಿ ಜಯಿಸಿದ ಮಹಿಳೆ ಭಾರತಿ ವಿಧಿಯಾಟದ ಜೊತೆಗಿನ ಸೆಣಸಾಟದಲ್ಲಿ ಸೋತು ಮರಬಿದ್ದಿದ್ದರಿಂದ ತಮ್ಮ ಕಾರಿನಲ್ಲೇ ತಮ್ಮ ಗಂಡ ರಮೇಶ್ ಹಾಗೂ ತಮ್ಮ ಜಗದೀಶ್ ರೊಂದಿಗೆ ಕೊನೆಯುಸಿರೆಳೆದಿದ್ದಾರೆ.
ಭಾರತಿ ಕುಟುಂಬದ ಮೂಲಗಳು ತಿಳಿಸಿರುವಂತೆ ಭಾರತಿ ಅವರು ಹಲವು ವರ್ಷಗಳಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ. ಅವರ ಚಿಕಿತ್ಸೆಗಾಗಿ ಪತಿ ರಮೇಶ್ ಸಾಕಷ್ಚು ಸಾಲ ಮಾಡಿಕೊಂಡಿದ್ದರಂತೆ. ಅಂತೆಯೇ ಸಹೋದರ  ಜಗದೀಶ್ ಕೂಡ ಆರ್ಥಿಕ ನೆರವು ನೀಡಿದ್ದರಂತೆ. ಇತ್ತೀಚಷ್ಟೇ ವೈದ್ಯರು ಅವರ ಕ್ಯಾನ್ಸರ್ ಗುಣಮುಖವಾದ ಕುರಿತು ಮಾಹಿತಿ ನೀಡಿದ್ದರು. ಇದೇ ಕಾರಣಕ್ಕಾಗಿ ಭಾರತಿ ಇತ್ತೀಚೆಗಷ್ಟೇ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರಂತೆ. ಪತಿ  ರಮೇಶ್ ತಮ್ಮ ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಹೀಗಾಗಿ ಭಾರತಿ ತಾವೂ ಕೂಡ ಕೆಲಸಕ್ಕೆ ಹೋಗಿ ಸಾಲ ತೀರಿಸಲು ಮುಂದಾಗಿದ್ದರು. ಇದಕ್ಕಾಗಿ ಭಾರತಿ ಅವರು ಹೋಮ್ ಗಾರ್ಡ್ ನಲ್ಲಿ ಕೆಲಸಕ್ಕೆ ಸೇರಿದ್ದರು  ಎಂದು ಹೇಳಲಾಗಿದೆ.  ಆದರೆ ಕ್ಯಾನ್ಸರ್ ನ ಜೊತೆಗಿನ ಹೋರಾಟದಲ್ಲಿ ಭಾರತಿ ಗೆದ್ದರೂ ವಿಧಿಯಾಟ ಗೆಲ್ಲಲಾಗದೇ ಮಳೆಗೆ ಬಲಿಯಾಗಿದ್ದಾರೆ.

ಕೇವಲ ಭಾರತಿ ಅವರು ಮಾತ್ರವಲ್ಲದೇ ಅವರೊಂದಿಗೆ ಪತಿ ರಮೇಶ್ ಹಾಗೂ ಸಹೋದರ ಜಗದೀಶ್ ಕೂಡ ಮೃತಪಟ್ಟಿದ್ದಾರೆ.

ಇನ್ನು ಜಗದೀಶ್ ಅವರು ವೃತ್ತಿಯಲ್ಲಿ ಟೈಲರ್ ಆಗಿದ್ದು, ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜಗದೀಶ್ ತಮ್ಮ ಇಬ್ಬರು ಸಹೋದರಿಯರ ಮದುವೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಂತೆ. ಇತ್ತೀಚೆಗಷ್ಟೇ  ಅಂಗಡಿಯೊಂದನ್ನು ಬಾಡಿಗೆಗೆ ಪಡೆದು ದುಡಿಮೆ ಆರಂಭಿಸಿದ್ದರಂತೆ. ಅಷ್ಟರಲ್ಲಾಗಲೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದು ಜಗದೀಶ್ ಅವರನ್ನು ಬಲಿ ಪಡೆದಿದ್ದಾನೆ.

ಹೇಗಾಯ್ತು ಘಟನೆ?
ಮಾರುತಿ ಎಸ್ಟೀಮ್ ಕಾರು ರಿಪೇರಿ ಮಾಡಿಸಲು ಪತ್ನಿ ಹಾಗೂ ಭಾವ ಅವರೊಂದಿಗೆ ರಮೇಶ್ ಡಿಸ್ಪೆನ್ಸರಿ ರಸ್ತೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ಬಂದಿದ್ದ ಅವರು ರಾತ್ರಿವರೆಗೂ ಅಲ್ಲಿಯೇ ಇದ್ದರು. ರಾತ್ರಿ 7.45ಕ್ಕೆ ದುರಸ್ತಿಗೊಂಡ ಬಳಿಕ  ಕಾರನ್ನು ಪರೀಕ್ಷಿಸಲು ಮೆಕಾನಿಕ್ ಅಲಿ, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು, ರಮೇಶ್ ಹಾಗೂ ಇನ್ನಿಬ್ಬರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಸುರಿದ ಗಾಳಿಸಹಿತ ಭಾರಿ ಮಳೆಗೆ ಗ್ಯಾರೇಜ್ ಪಕ್ಕದಲ್ಲಿಯೇ ಇದ್ದ ಮರ  ಕಾರಿನ ಹಿಂಭಾಗದ ಮೇಲೆ ಬಿದ್ದಿದೆ. ಅದರಿಂದಾಗಿ ರಮೇಶ್, ಭಾರತಿ ಮತ್ತು ಜಗದೀಶ್ ಮರದ ಕೆಳಗೆ ಸಿಲುಕಿದ್ದರು. ಸ್ಥಳೀಯರು, ಅಗ್ನಿಶಾಮಕದ ದಳದ ಸಿಬ್ಬಂದಿ ಧಾವಿಸಿ, ಮರದ ಕೆಳಗೆ ಸಿಲುಕಿದ್ದವರ ರಕ್ಷಣೆ ಮಾಡಲು  ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಇನ್ನು, ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಅಲಿಯನ್ನು ಮಾತ್ರ ರಕ್ಷಿಸಲಾಗಿದೆ. ರಮೇಶ್ ಹಾಗೂ ಭಾರತಿ ದಂಪತಿ ಪುತ್ರ ರಾಹುಲ್ ಕಾರಿನಲ್ಲಿ ಕುಳಿತುಕೊಳ್ಳದೆ ಹೊರಗೆ ನಿಂತಿದ್ದರಿಂದಾಗಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com