ಬೆಂಗಳೂರು: ನಗರದಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಗೋಡೆ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜೈಭೀಮನಗರ ಕೊಳಗೇರಿಯ ಸಾದರಮಂಗಲದಲ್ಲಿ ನಡೆದಿದೆ.
ರಾಜು (36) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಗಾರೆ ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ರಾಜು ಅವರ ತಾಯಿ ಕೂಡ ಗಾಯಗೊಂಡಿದ್ದಾರೆ.
ನಗರದಲ್ಲಿ ಪ್ರತೀನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಾಜು ಮನೆಯ ಗೋಡೆಗಳೆಲ್ಲ ಶಿಥಿಲಗೊಂಡಿದ್ದವು. ಆದರೂ ರಾಜು ಮತ್ತು ಅವರ ಕುಟುಂಬ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅದೇ ಮನೆಯಲ್ಲಿಯೇ ವಾಸವಿದ್ದರು. ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿದೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ರಾಜು ಅವರ ತಾಯಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆ ಕುಸಿದುಬಿದ್ದ ಬಳಿಕ ರಾಜು ಅವರು ಜೋರಾಗಿ ಕೂಗಿದ್ದಾರೆ. ರಾಜು ಅವರ ಕೂಗು ಕೇಳಿದ ಕೂಡಲೇ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಇಟ್ಟಿಗೆಗಳನ್ನು ತೆಗೆಯುವಷ್ಟರಲ್ಲಿ ರಾಜು ಅವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಭಾರೀ ಮಳೆಯಾಗುತ್ತಿತ್ತು. ಸ್ಥಳದಲ್ಲಿ ವಿದ್ಯುತ್ ಕೂಡ ಇರಲಿಲ್ಲ. ರಾಜು ಕೂಗಾಟ ಕೇಳಿ ಹೊರಗೆ ಬಂದಿದ್ದೆ. ಈ ವೇಳೆ ಗೋಡೆ ಕುಸಿದಿರುವುದು ಕಂಡು ಬಂತು. ಬಳಿಕ ಇಟ್ಟಿಗೆಗಳನ್ನು ಪಕ್ಕಕ್ಕೆ ಸರಿಸಿ ರಾಜು ಅವರ ದೇಹವನ್ನು ಹೊರಗೆ ತೆಗೆದೆ. ದೇಹ ಇನ್ನೂ ಬಿಸಿಯಾಗಿಯೇ ಇತ್ತು. ಹೀಗಾಗಿ ರಾಜು ಇನ್ನು ಬದುಕಿದ್ದಾನೆಂದು ತಿಳಿದು ಆ್ಯಂಬುಲೆನ್ಸ್ ಗೆ ಕರೆ ಮಾಡಲಾಯಿತು. ಆ್ಯಂಬುಲೆನ್ಸ್ ಬರಲು ತಡವಾದ್ದರಿಂದ ಕಾರಿನಲ್ಲಿಯೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ರಾಜು ಅವರು ಮೃತಪಟ್ಟಿದ್ದರು ಎಂದು ಸ್ಥಳೀಯ ರಾಜೇಂದ್ರ ಅವರು ಹೇಳಿದ್ದಾರೆ.
ಮಗನ ಮೇಲೆ ಸಂಪೂರ್ಣವಾಗಿ ಇಟ್ಟಿಗೆಗಳು ಬಿದ್ದಿದ್ದವು. ನನ್ನ ಕಾಲಿನ ಮೇಲೆ ಇಟ್ಟಿಗೆಗಳು ಬಿದ್ದಿದ್ದರಿಂದ ತಿರುಗುವುದಕ್ಕೂ ಆಗುತ್ತಿರಲಿಲ್ಲ. ಬಳಿಕ ರಾಜೇಂದ್ರ ಅವರನ್ನು ಕೂಗಿ ನನ್ನ ಮಗನನ್ನು ಕಾಪಾಡುವಂತೆ ತಿಳಿಸಿದೆ ಎಂದು ರಾಜು ಅವರ ತಾಯಿ ಚಿನ್ನಮ್ಮ ಅವರು ಹೇಳಿದ್ದಾರೆ.