ಬೆಂಗಳೂರು: ನಾಣ್ಯ ಬೀಳಿಸಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದ ಗರ್ಭಿಣಿ; ನಗ-ನಾಣ್ಯ ದೋಚಿ ಪರಾರಿ!

ಪದೇ ಪದೇ ನಾಣ್ಯ ಬೀಳಿಸಿ ಅದನ್ನು ಎತ್ತಿಕೊಳ್ಳುತ್ತಾ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದ ಗರ್ಭಿಣಿಯೊಬ್ಬಳು ನಂತರ ಮಹಿಳೆಯೊಬ್ಬರ ಚಿನ್ನ ಹಾಗೂ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಪದೇ ಪದೇ ನಾಣ್ಯ ಬೀಳಿಸಿ ಅದನ್ನು ಎತ್ತಿಕೊಳ್ಳುತ್ತಾ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದ ಗರ್ಭಿಣಿಯೊಬ್ಬಳು ನಂತರ ಮಹಿಳೆಯೊಬ್ಬರ ಚಿನ್ನ ಹಾಗೂ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
ಕೋಣನಕುಂಟೆ ನಿವಾಸಿಯಾಗಿರುವ ಸರಸ್ವತಿ ರಮೇಶ್ (32) ಹಣ ಹಾಗೂ ಚಿನ್ನ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಬೇಸಿಗೆ ರಜೆ ಕಳೆಯುವ ಸಲುವಾಗಿ ಮಕ್ಕಳು ಹೊಸೂರಿನಲ್ಲಿರುವ ತಾತ-ಅಜ್ಜಿ ಮನೆಗೆ ಹೋಗಿದ್ದರು. ಮಕ್ಕಳನ್ನು ನೋಡುವ ಸಲುವಾಗಿ ಸರಸ್ವತಿಯವರು ಬಂದಿದ್ದರು. 
ಸಹೋದರಿ ಬೆಂಗಳೂರಿನಲ್ಲಿ ಮನೆಯನ್ನು ಕಟ್ಟುತ್ತಿರುವುದರಿಂದ ಆರ್ಥಿಕವಾಗಿ ಸಹಾಯ ಮಾಡಲೆಂದು ಹಣ ಹಾಗೂ ಆಭರಣಗಳನ್ನು ತಂದಿದ್ದೆ. 
ಹೊಸೂರಿನಿಂದ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ 30 ವರ್ಷದ ಗರ್ಭಿಣಿ ಮಹಿಳೆ ಹಾಗೂ ಆಕೆಯ 2 ವರ್ಷದ ಮಗನೊಬ್ಬ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತುಕೊಂಡಿದ್ದರು. ಮಹಿಳೆ ಮುಗ್ದೆಯಂತೆ ಕಾಣುತ್ತಿದ್ದಳು. ಮಧ್ಯಾಹ್ನ  12.30ರ ಸಮಯದಲ್ಲಿ ಮಹಿಳೆ ಬಾಲಕನಿಗೆ ರೂ.2 ನಾಣ್ಯ ಕೊಟ್ಟಿದ್ದಳು. ಬಾಲಕ ಆಗಾಗ ಅದನ್ನು ಕೆಳಗೆ ಬೀಳಿಸುತ್ತಿದ್ದ. 
ಮಹಿಳೆ ಗರ್ಭಿಣಿಯಾಗಿದ್ದರಿಂದ ಆಕೆ ಬಗ್ಗಿ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಆಕೆಯನ್ನು ನೋಡಿ ಪಾಪ ಎನಿಸಿತು. ಹೀಗಾಗಿ ಬಾಲಕ ನಾಣ್ಯವನ್ನು ಎಸೆದಾಗಲೆಲ್ಲಾ ನಾನೇ ತೆಗೆದುಕೊಡುತ್ತಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಚಂದಾಪುರದ ಜಂಕ್ಷನ್ ಬಳಿ ತಾಯಿ ಹಾಗೂ ಮಗು ಇಬ್ಬರೂ ಬಸ್ಸಿನಿಂದ ಇಳಿದರು. 
ಬಸ್ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅನುಮಾನಗೊಂಡು ಬ್ಯಾಗ್ ನೋಡಿದಾಗ, ಹಣ ಹಾಗೂ ಒಡವೆ ಕಾಣಿಸಲಿಲ್ಲ. ಕೂಡಲೇ ಚಾಲಕ ಹಾಗೂ ನಿರ್ವಾಹಕರಿಗೆ ವಿಚಾರ ತಿಳಿಸಿದೆ. ಬಸ್ ನಿಲ್ಲಿಸಿ ನೋಡುವಷ್ಟರದಲ್ಲಿ ಅವರು ಹೊರಟು ಹೋಗಿದ್ದರು. 
ನನ್ನ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಮಹಿಳೆಯೇ ನಾಣ್ಯ ಬೀಳಿಸಿ ಪಿತೂರಿ ನಡೆಸಿದ್ದು, ಈವೇಳೆ ನಗ ಹಾಗೂ ನಾಣ್ಯ ದೋಚಿದ್ದಾಳೆ. ತನ್ನ ಕೃತ್ಯಕ್ಕೆ ಏನೂ ಅರಿಯದ ಮಗುವನ್ನು ಬಳಸಿಕೊಂಡಿದ್ದಾಳೆಂದು ಸರಸ್ವತಿಯವರು ಹೇಳಿಕೊಕಂಡಿದ್ದಾರೆ. 
ಘಟನೆ ಬಳಿಕ ಪೊಲೀಸ್ ಠಾಣೆಗೆ ತೆರಳಿರುವ ಸರಸ್ವತಿಯವರು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಂದಾಪುರ ಜಂಕ್ಷನ್ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com