

ಬೆಂಗಳೂರು: ಯುವಕನೊಬ್ಬನನ್ನು ಆತನ ಸ್ನೇಹಿತ 4ನೇ ಮಹಡಿಯಿಂದ ಕೆಳಗೆ ದೂಡಿ ಸಾಯಿಸಿದ ಘಟನೆ ವಿವಿ ಪುರಂನಲ್ಲಿ ನಡೆದಿದೆ.
ಮೃತ ಯುವಕನನ್ನು 23 ವರ್ಷದ ರೊನಕ್ ಚೌಧರಿ ಎಂದು ಗುರುತಿಸಲಾಗಿದ್ದು ನರ್ಸಿಂಗ್ ಪರೀಕ್ಷೆ ಬರೆಯಲು ಬಂದಿದ್ದರು.
ಘಟನೆಯೇನು?: ರೊನಕ್ ಚೌಧರಿ ಮತ್ತು ರೊಯಲ್ ಚೌಧರಿ ಎಂಬ ಯುವಕರು ತ್ರಿಶಾಲ್ ಲಾಡ್ಜ್ ನಲ್ಲಿ ತಂಗಿದ್ದರು. ಇಬ್ಬರೂ ಕೂಡ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ರೊಯಲ್ ಚೌಧರಿ ಮೇಲೆ ಮನಸ್ಸಿತ್ತು. ಹೊಟೇಲ್ ನಲ್ಲಿ ಈ ವಿಚಾರಕ್ಕೆ ಇಬ್ಬರ ಮಧ್ಯೆ ಮಾತುಕತೆ ನಡೆದು ಜಗಳ ಆರಂಭವಾಯಿತು. ಸಿಟ್ಟಿನಲ್ಲಿ ರೊಯಲ್ ರೊನಕ್ ನನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದನು. ಪೊಲೀಸರಿಗೆ ಮೊನ್ನೆ ಬುಧವಾರ ರಾತ್ರಿ 8.30ರ ಸುಮಾರಿಗೆ ವಿಷಯ ತಿಳಿಯಿತು.
ಪೊಲೀಸರು ತನಿಖೆ ನಡೆಸಿದಾಗ ಪ್ರಾಥಮಿಕ ತನಿಖೆಯಲ್ಲಿ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. ಆಗಸ್ಟ್ 2ರಂದು ಗುಜರಾತ್ ನಿಂದ ಸುಮಾರು 30 ವಿದ್ಯಾರ್ಥಿಗಳು ನಗರಕ್ಕೆ ನರ್ಸಿಂಗ್ ಪರೀಕ್ಷೆ ಬರೆಯಲು ಬಂದಿದ್ದರು. ರೊನಕ್, ರೊಯಲ್ ಮತ್ತು ಯುವತಿ ಒಂದೇ ಕೋಣೆಯಲ್ಲಿ ವಿ ವಿ ಪುರಂನ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಮೊನ್ನೆ ಬುಧವಾರ ಪರೀಕ್ಷೆ ಮುಗಿದಿತ್ತು. ನಿನ್ನೆ ಊರಿಗೆ ಹೊರಡಲು ಅನುವಾಗಿದ್ದರು. ಹೊಟೇಲ್ ಕೊಠಡಿಯ ಹೊರಗೆ ಬಾಲ್ಕನಿಯಲ್ಲಿ ಕುಳಿತಿದ್ದಾಗ ರೊನಕ್ ಮತ್ತು ರೊಯಲ್ ಮಧ್ಯೆ ಪ್ರೀತಿ ವಿಚಾರದಲ್ಲಿ ಜಗಳ ಆರಂಭವಾಯಿತು.
ಇಬ್ಬರ ಜಗಳವನ್ನು ಬಿಡಿಸಲು ಯುವತಿ ಯತ್ನಿಸಿದಳು. ಯುವತಿ ತನ್ನನ್ನು ಪ್ರೀತಿಸುತ್ತಿದ್ದು ಆಕೆಯ ತಂಟೆಗೆ ಬರಬೇಡವೆಂದು ರೊನಕ್ ರೊಯಲ್ ಗೆ ಎಚ್ಚರಿಕೆ ನೀಡಿದನು. ಇವರ ಜಗಳ ಹೊಟೇಲ್ ಸಿಬ್ಬಂದಿ ಗಮನಕ್ಕೆ ಬಂದಿರಲಿಲ್ಲ. ಸಿಟ್ಟಿನಲ್ಲಿ ರೊಯಲ್ ರೊನಕ್ ನನ್ನು 4 ನೇ ಮಹಡಿಯಿಂದ ಕೆಳಗೆ ತಳ್ಳಿದನು. ರಕ್ತದ ಮಡುವಿನಲ್ಲಿ ಬಿದ್ದ ರೊನಕ್ ನನ್ನು ಕಂಡ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದರು.
ತೀವ್ರ ಪೆಟ್ಟಾಗಿದ್ದರಿಂದ ರೊನಕ್ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.