ಏರೋ ಇಂಡಿಯಾ: ಬೆಂಗಳೂರು ಅಥವಾ ಲಖನೌ? ಗೊಂದಲಕ್ಕೆ ತೆರೆ ಎಳೆಯಿರಿ: ಕೇಂದ್ರಕ್ಕೆ ರಾಜ್ಯಸರ್ಕಾರದ ಮನವಿ

ಇದೇ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಬೇಕಿರುವ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ವಿವಾದದ ಕುರಿತು ಎದ್ದಿರುವ ಗೊಂದಲಗಳಿಗೆ ಕೂಡಲೇ ತೆರೆ ಎಳೆಯುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಇದೇ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಬೇಕಿರುವ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ವಿವಾದದ ಕುರಿತು ಎದ್ದಿರುವ ಗೊಂದಲಗಳಿಗೆ ಕೂಡಲೇ ತೆರೆ ಎಳೆಯುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಕಳೆದೊಂದು ವಾರದಿಂದ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ಕುರಿತು ಭಾರಿ ಚರ್ಚೆಗಳಾಗುತ್ತಿದ್ದು, ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ರನ್ನು ಭೇಟಿ ಮಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಏರ್ ಷೋವನ್ನು ಲಖನೌಗೆ ಸ್ಥಳಾಂತರ ಮಾಡಲು ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ಉತ್ತರ ಪ್ರದೇಶ ಸರ್ಕಾರವಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ ಊಹಾಪೋಹಗಳು ಮುಂದುವರೆದಿದ್ದು, ಇದೇ ಕಾರಣಕ್ಕೆ ಈ ಕುರಿತ ಗೊಂದಲಕ್ಕೆ ತೆರೆ ಎಳೆಯುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಆಗ್ರಸಿಹಿಸಿದೆ.
ಈ ಬಗ್ಗೆ ಮಾತನಾಡಿರುವ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರು, ಎನ್ ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಸಾಕಷ್ಚು ರಕ್ಷಣಾ ಯೋಜನೆಗಳು ಕೈ ತಪ್ಪಿ ಹೋಗುತ್ತಿವೆ. ಈ ಹಿಂದೆ ಹೆಚ್ ಎಎಲ್ ವಿಮಾನ ತಯಾರಿಕಾ ಯೋಜನೆ ಕೈ ತಪ್ಪಿತ್ತು, ಇದೀಗ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರವಾಗುವ ಭೀತಿ ಎದುರಾಗಿದೆ. ಈ ಬಗ್ಗೆ ರಾಜ್ಯದ ಜನತೆ ಗೊಂದಲದಿಂದಿದ್ದು, ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಬಾರಿ ಏರ್ ಇಂಡಿಯಾ ಷೋಗೆ ಬೆಂಗಳೂರು ಯಶಸ್ವಿಯಾಗಿ ಆತಿಥ್ಯವಹಿಸಿತ್ತು. ಈ ಬಾರಿಯೂ ಬೆಂಗಳೂರಿನಲ್ಲೇ ಕಾರ್ಯಕ್ರಮ ನಡೆಯಲಿದೆ ಎಂಬ ವಿಶ್ವಾಸವಿತ್ತಾದರೂ ಅಂತಿಮ ಕ್ಷಣದ ಬೆಳವಣಿಗೆಗಳು ಇದಕ್ಕೆ ವ್ಯತಿರಿಕ್ತವಾಗಿವೆ. ಒಂದು ವೇಳೆ ಇದು ನಿಜವೇ ಆದರೆ 1996ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಏರೋ ಇಂಡಿಯಾ ಕಾರ್ಯಕ್ರಮ ಆಯೋಜನೆಯಾದಂತಾಗುತ್ತದೆ.
ಏರೋ ಇಂಡಿಯಾ ಷೋವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎನ್ ಡಿಎ ಸರ್ಕಾರ
ಇನ್ನು ಏರೋ ಇಂಡಿಯಾ ಷೋವನ್ನೂ ಎನ್ ಡಿಎ ಸರ್ಕಾರ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಘಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲದೆ ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು, ಇದೇ ಕಾರಣಕ್ಕೆ ಏರ್ ಷೋವನ್ನು ಲಖನೌಗೆ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com