ಬೆಂಗಳೂರು: ಯುವಕನೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯ ಅನೇಕಲ್'ನ ಸಿಕೆ ಪಾಳ್ಯದಲ್ಲಿ ಶನಿವಾರ ಸಂಜೆ ನಡೆದಿದೆ.
ಪವನ್ ಕುಮಾರ್ (19) ಸಾವನ್ನಪ್ಪಿರುವ ಯುವಕನಾಗಿದ್ದಾನೆ. ಶಿವಕುಮಾರ್ ಎಂಬುವವರ ಪುತ್ರನಾಗಿರುವ ಪವನ್ ಕೊರಿಯರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
ಕೆಲ ದಿನಗಳ ಹಿಂದಷ್ಟೇ ಪವನ್ ಪೋಷಕರು ತಮಿಳುನಾಡು ಪ್ರವಾಸಕ್ಕೆ ಹೋಗಿದ್ದರು. ಶನಿವಾರ ಸಂಜೆ ಹಿಂತಿರುಗಿ ಮನೆಗೆ ಬಂದಾಗ ಮನೆಯೊಳಗಿನಿಂದ ಬಾಗಿಲು ಲಾಕ್ ಆಗಿರುವುದು ಕಂಡು ಬಂದಿದೆ. ಈ ವೇಳೆ ಎಷ್ಟೇ ಕೂಗಿದರೂ ಪವನ್ ಉತ್ತರ ನೀಡಿಲ್ಲ.
ಹೀಗಾಗಿ ಬಾಗಿಲು ಒಡೆದು ನೋಡಿದಾಗ ಪವನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣ ಕುರಿತಂತೆ ಪವನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ದೃಶ್ಯಾವಳಿಯಲ್ಲಿ ಮನೆಯತ್ತ ಯಾರೊಬ್ಬರೂ ಸುಳಿದಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಪ್ರಕರಣವೊಂದು ಆತ್ಮಹತ್ಯೆಯಿರಬಹುದು ಎಂದು ಶಂಕಿಸಿದ್ದಾರೆ.