ಭೂಕುಸಿತ: ಮಂಗಳೂರು - ಬೆಂಗಳೂರು ನಡುವೆ ರಸ್ತೆ, ರೈಲು ಸಂಚಾರ ಸಂಪೂರ್ಣ ಸ್ಥಗಿತ
ಮಂಗಳೂರು: ಭೂ ಕುಸಿತದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು- ಬೆಂಗಳೂರು ಸಂಪರ್ಕ ಕಲ್ಪಿಸುವ ರಸ್ತೆ, ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯ ಸಾರಿಗೆ ಸಂಸ್ಥೆ ಬಸ್, ಹಾಗೂ ರೈಲು ಪ್ರಯಾಣಿಕರು ತಮ್ಮ ಊರಿಗೆ ತೆರಳಲು ತೀವ್ರ ತೊಂದರೆ ಎದುರಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಮಾರನಹಳ್ಳಿ ,ಎಡಕುಮಾರಿ, ಮತ್ತು ಶಿರವಾಗಿಲು ರೈಲ್ವೆ ಜಂಕ್ಷನ್ ಬಳಿ ಭೂಕುಸಿತ ಉಂಟಾಗಿದ್ದು, ಬಿಸಲೆ ಸುಬ್ರಹ್ಮಣ್ಯ ಮತ್ತು ಚಾರ್ಮಡಿ ಘಾಟ್ ರಸ್ತೆಯಲ್ಲಿ ದಟ್ಟಣೆ ಉಂಟಾಗಿದೆ. ಚಾರ್ಮಡಿ ಘಾಟ್ ಬಳಿಯ ವಾಹನ ದಟ್ಟಣೆಯಿಂದಾಗಿ ಉಡುಪಿ, ಮಂಗಳೂರು, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೂರು ಕಡೆಗಳಲ್ಲಿ ಭೂ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಲಾಗಿದೆ. ಜೆಸಿಬಿ ಯಂತ್ರಗಳ ಮೂಲಕ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದ ಜನರು ತೀವ್ರ ಹರಸಾಹಸಪಡುವಂತಾಗಿದೆ.
ಭೂ ಕುಸಿತದಿಂದಾಗಿ ಅರಕಲಗೂಡು- ಬಿಸಲೆ ಘಾಟ್ , ಬಲ್ಲುಪೇಟೆ, ಅರಕಲಗೂಡು ಮತ್ತು ಉಚ್ಚಂಗಿ, ಸಕಲೇಶಪುರ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಲೋಕೋಪಯೋಗಿ ಹಾಗೂ ರೈಲ್ವೆ ಕಾರ್ಯಾಚರಣಾ ತಂಡ ಜೆಸಿಬಿ ಯಂತ್ರಗಳ ಮೂಲಕ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಕಲೇಶಪುರ, ಆಲೂರು, ಮತ್ತು ಅರಕಲಗೂಡಿನಲ್ಲಿ ಶಾಲಾ, ಕಾಲೇಜುಗಳಿಗೆ ತಹಸೀಲ್ದಾರ್ ರಜೆ ಘೋಷಿಸಿದ್ದಾರೆ.

