72ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಶಾ ಸಜ್ಜು; ಹೆಲ್ಮೆಟ್, ಕಪ್ಪುವಸ್ತ್ರಗಳಿಗೆ ನಿಷೇಧ

ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ವಿವಿಧ ಪಡೆಗಳ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಭರ್ಜರಿ ತಾಲೀಮು ನಡೆಯುತ್ತಿದೆ...
72ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಶಾ ಸಜ್ಜು; ಹೆಲ್ಮೆಟ್, ಕಪ್ಪುವಸ್ತ್ರಗಳಿಗೆ ನಿಷೇಧ
72ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಶಾ ಸಜ್ಜು; ಹೆಲ್ಮೆಟ್, ಕಪ್ಪುವಸ್ತ್ರಗಳಿಗೆ ನಿಷೇಧ
ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ವಿವಿಧ ಪಡೆಗಳ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಭರ್ಜರಿ ತಾಲೀಮು ನಡೆಯುತ್ತಿದೆ.
ಸ್ವಾತಂತ್ರ್ಯ ದಿನ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಮೈದಾನದ ಸುತ್ತಲೂ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಮೈದಾನದ ಸುತ್ತಲೂ 50ಕ್ಕೂ ಹೆಚ್ಚು ಸಿಸಿಟಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. 
ಸಿದ್ಧತೆ ಕುರಿತಂತೆ ನಿನ್ನೆ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಗರ ಪೊಲೀಸ್ ಆಯುಕ್ತ ಟಿ, ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. 
ಸ್ವಾತಂತ್ರ್ಯ ದಿನಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ನಗರ ಪೊಲೀಸ್ ವತಿಯಿಂದ ಒಟ್ಟಾರೆ 1500 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 9 ಡಿಸಿಪಿ, 16 ಎಸಿಪಿ, 102 ಪಿಎಸ್ಐ, 77 ಎಎಸ್ಐ, 540 ಪೇದೆಗಳು, 75 ಮಹಿಳಾ ಸಿಬ್ಬಂದಿ, 114 ಮಫ್ತಿ ಪೊಲೀಸರು ಸೇರಿ ಒಟ್ಟಾರೆ 1500 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. 
ಮೈದಾನದೊಳಗೆ 9 ಕೆಎಸ್ಆರ್'ಪಿ ತುಕಡಿಗಳು, 5 ಕಾರು, 3 ಅಗ್ನಿಶಾಮಕ ದಳದ ವಾಹನಗಳು, 2 ಆ್ಯಂಬುಲೆನ್ಸ್ ಗಳು, 2 ತ್ವರಿತ ಪ್ರತಿಕ್ರಿಯೆ ತಂಡಗಳು, ಪ್ರತೀ ಘಟಕಕ್ಕೂ ಒಂದೊಂದು ಡಿ-ಸ್ವಾಟ್, ಆರ್'ಐವಿ ಮತ್ತು ಗರುಡಾ ಪಡೆಗಳನ್ನು ನಿಯೋಜಿಸಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುವಂತೆ ಕೆಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. 
ಮೈದಾನದ ಆವರಣದಲ್ಲಿ ಕೆಲ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ನೀರಿನ ಬಾಟಲ್ ಗಳು ಹಾಗೂ ಕ್ಯಾನ್ ಗಳು, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಚಾಕು-ಚೂರಿ, ಕಪ್ಪು ಕರವಸ್ತ್ರ, ತಿಂಡಿ-ತಿನಿಸುಗಳು, ಮದ್ಯ, ಮಾದಕ ವಸ್ತು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರುವಂತಿಲ್ಲ. 
ಭದ್ರತಾ ದೃಷ್ಟಿಯಿಂದ ಪರೇಡ್'ಗೆ ಬರುವ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್ ಫೋನ್, ಹೆಲ್ಮೆಟ್, ಕ್ಯಾಮೆರಾ, ರೆೇಡಿಯೋ, ಕೊಡೆ ತರದಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. 
ರಾಜ್ಯ ಮುಖ್ಯಮಂತ್ರಿ ಹೆಚ್,ಡಿ.ಕುಮಾರಸ್ವಾಮಿಯವರು ಮೈದಾನಕ್ಕೆ 9 ಗಂಟೆಗೆ ಆಗಮಿಸಲಿದ್ದು, ನಂತರ ಧ್ವಜರೋಹಣ ನೆರವೇರಿಸಲಿದ್ದಾರೆ. 
ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಿದೆ. ಧ್ವಜಾರೋಹಣದ ಬಳಿಕ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿರುವ ಹರಿಸು ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿಗಳು ಸಸಿ ನೆಡುವ ಮತ್ತು ಸರಿ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. 
ಈ ಬಾರಿ ವಿಶೇಷವಾಗಿ ಯೋಗಪಟು ಮಾನ್ಸಿ ಗುಲಾಟಿಯವರ ಯೋಗ ಪ್ರದರ್ಶನ ಆಯೋಜಿಸಲಾಗಿದೆ. ಮದ್ರಾಸ್ ಎಂಜಿನಿಯರಿಂಗ್ ತಂಡದಿಂದ ಜಿಮ್ನಾಸ್ಟಿಕ್, ಎಎಸ್'ಸಿ ಟಾರ್ನೆಡೋಸ್'ನ 39 ಸದಸ್ಯರಿಂದ ಆಕರ್ಷಕ ಮೋಟಾರ್ ಸೈಕಲ್ ಪ್ರದರ್ಶನ ಹಾಗೂ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ಮೊಳಗಲಿವೆ. 
ಗೋವಾ ಪೊಲೀಸ್, ಸ್ಕೌಟ್ಸ್ ಗೈಡ್ಸ್, ಎನ್'ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡ್'ನ 34 ತುಕಡಿಗಳು ಶನಿವಾರದಿಂದಲೇ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳ ಅಭ್ಯಾಸ ನಡೆಸುತ್ತಿದ್ದಾರೆ. ಮೂರು ಶಾಲೆಗಳಿಂದ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com