ಭಾರೀ ಮಳೆಗೆ ಕರ್ನಾಟಕ ತತ್ತರ: ಮಂಜಿನ ಜಿಲ್ಲೆ ಕೊಡಗಿನಲ್ಲಿ ಶತಮಾನದ ಪ್ರಳಯ

ಕಳೆದ ಹಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಸೃಷ್ಟಿಯಾಗುತ್ತಿರುವ ಅವಾಂತರಗಳಿಂದ ಕರ್ನಾಟಕ ತತ್ತರಗೊಂಡಿದೆ. ಪ್ರಮುಖವಾಗಿ ಮಂಜಿನ ಜಿಲ್ಲೆ...
ಭಾರೀ ಮಳೆಗೆ ಕರ್ನಾಟಕ ತತ್ತರ: ಮಂಜಿನ ಜಿಲ್ಲೆ ಕೊಡಗಿನಲ್ಲಿ ಶತಮಾನದ ಪ್ರಳಯ
ಭಾರೀ ಮಳೆಗೆ ಕರ್ನಾಟಕ ತತ್ತರ: ಮಂಜಿನ ಜಿಲ್ಲೆ ಕೊಡಗಿನಲ್ಲಿ ಶತಮಾನದ ಪ್ರಳಯ
Updated on: 
ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಸೃಷ್ಟಿಯಾಗುತ್ತಿರುವ ಅವಾಂತರಗಳಿಂದ ಕರ್ನಾಟಕ ತತ್ತರಗೊಂಡಿದೆ. ಪ್ರಮುಖವಾಗಿ ಮಂಜಿನ ಜಿಲ್ಲೆ ಕೊಡಗು ಜಿಲ್ಲೆಯಂತೂ ಅಕ್ಷರಶಃ ನಲುಗಿ ಹೋಗಿದೆ. 
ಕೊಡಗು ಜಿಲ್ಲೆಯ ಮಕ್ಕಂದೂರು ಹಾಗೂ ಜೋಡುಪಾಲ ಸೇರಿ 10ಕ್ಕೂ ಹೆಚ್ಚು ಕಡೆ ಶುಕ್ರವಾರ ಕೂಡ ಗುಡ್ಡ ಕುಸಿತ ಮುಂದುವರೆದಿದ್ದು, ಎರಡು ತಿಂಗಳ ಹಸುಗೂಸು ಸೇರಿ ಒಟ್ಟು 3 ಜನರು ಬಲಿಯಾಗಿದ್ದಾರೆ. 
ಸುಳ್ಯ ಗಡಿಗೆ ಹೊಂದಿಕೊಂಡಿರುವ ಜೋಡುಪಾಲದಲ್ಲಿ ಸಂಭವಿಸಿದ ಗುಡ್ಡಕುಸಿತದಲ್ಲಿ ಐದು ಮಂದಿ ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ಮಳೆ ಸಂಬಂಧಿ ಅನಾಹುತಕ್ಕೆ ಕೊಡಗು ಜಿಲ್ಲೆಯಲ್ಲಿ ಈವರೆಗೆ ಆರು ಮಂದಿ ಸಾವಿಗೀಡಾಗಿದ್ದಾರೆ. 
ಮಳೆಯಿಂದಾಗಿ ಸಂಭವಿಸಿದ ಅವಾಂತರಗಳಿಂದಾಗಿ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ಜನರ ರಕ್ಷಣೆಗೆ ಸೇನಾ ಪಡೆ ಹಾಗೂ ಎನ್'ಡಿಆರ್'ಎಫ್ ಪಡೆಗಳು ರಕ್ಷಣೆಗೆ ಧಾವಿಸಿವೆ. ರಕ್ಷಣೆಯ ನಿರೀಕ್ಷೆಯಲ್ಲಿದ್ದ ಸುಮಾರು 873 ಜನರನ್ನು ನಿನ್ನೆ ಭದ್ರತಾ ಪಡೆಗಳು ರಕ್ಷಣೆ ಮಾಡಿವೆ. ಈ ನಡುವೆ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿಸಲು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. 
ಇನ್ನು ಮೈಸೂರು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಕಬಿನಿ ಜಲಾಶಯದಿಂದ 80,000ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ ಪರಿಣಾಮ ಮೈಸೂರು-ಉಧಂಗಮಂಡಲಂ-ಕೋಝಿಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. 
ಇನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು, ಕಾವೇರಿ ನದಿ ಅಪಾಯಮಟ್ಟಕ್ಕೆ ತಲುಪಿದ್ದು, ರಾಮನಾಥಪುರ ಹಾಗೂ ಕೇರಳಪುರ ಗ್ರಾಮಗಳು ಪ್ರವಾಹ ಆತಂಕ ಎದುರಿಸುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಗುರುವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಸುದೀರ್ಘ ಮಳೆಯಿಂದಾಗಿ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿ ಗುಡ್ಡಗಳ ರಸ್ತೆಗಳ ಬಳಿ ಭೂಕುಸಿತ ಉಂಟಾಗುತ್ತಿದೆ. 
ಶಿವಮೊಗ್ಗ ಜಿಲ್ಲೆಯಲ್ಲಿಯ ಲಿಂಗನಮಕ್ಕಿ, ಹೊಸನಗರ, ಸಾಗರ ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಲಿಂಗನಮಕ್ಕಿ ಜಲಾಶಯದಲ್ಲಿ 56,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. 
ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕೊಡಗು ಜಿಲ್ಲೆಯಂತೂ ಅತ್ಯಂತ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಎಷ್ಟು ಜನರ ಸಂಕಷ್ಟದಲ್ಲಿದ್ದಾರೆ ಹಾಗೂ ಎಷ್ಟು ಜನ ನಾಪತ್ತೆಯಾಗಿದ್ದಾರೆಂಬ ಮಾಹಿತಿಗಳು ಜಿಲ್ಲಾಧಿಕಾರಿಗಳಿಗೇ ತಿಳಿಯದಂತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com