ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ: ಸುಧಾಮೂರ್ತಿ

ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಷನ್ ನ ಸುಧಾಮೂರ್ತಿ ಅವರು ಹೇಳಿದ್ದಾರೆ.
ಮೇಲುಕೋಟೆಯಲ್ಲಿ ಸುಧಾಮೂರ್ತಿ
ಮೇಲುಕೋಟೆಯಲ್ಲಿ ಸುಧಾಮೂರ್ತಿ
ಮೇಲುಕೋಟೆ: ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಷನ್ ನ ಸುಧಾಮೂರ್ತಿ ಅವರು ಹೇಳಿದ್ದಾರೆ.
ಇಂದು ಮೇಲುಕೋಟೆಗೆ ಭೇಟಿ ನೀಡಿದ್ದ ಸುಧಾಮೂರ್ತಿ ಅವರು, ಕೊಡಗು ಪ್ರವಾಹ ಪೀಡಿತರ ಕುರಿತು ಮಾತನಾಡಿದರು. ಈ ವೇಳೆ ಸರ್ಕಾರ ನೀಡಿದ ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ನಮ್ಮ ತಂಡ ಮನೆ ಕಟ್ಟಿಕೊಡಲಿದೆ. ಅದಕ್ಕಾಗಿ ನಮ್ಮ ಸಂಸ್ಥೆ ಈಗಾಗಲೇ 25 ಕೋಟಿ ರೂ. ತೆಗೆದಿರಿಸಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ ದಸರಾ ಉದ್ಘಾಟನೆ ವೇಳೆ ಕೊಡಗು ಸಂತ್ರಸ್ತರಿಗೆ ನೆರವು ನೀಡಿ ಎಂದು ಸರ್ಕಾರ ನಮ್ಮನ್ನ ಕೇಳಿರಲಿಲ್ಲ. ಮನುಷ್ಯನ ದೇಹದಲ್ಲಿ ಒಂದು ಭಾಗಕ್ಕೆ ನೋವಾದರೆ ಇನ್ನೊಂದು ಭಾಗಕ್ಕೆ ನೋವಾದ ಹಾಗೆಯೇ. ಕೊಡಗು ನಮ್ಮ ಕರ್ನಾಟಕದ ಒಂದು ಭಾಗ. ಕೊಡಗಿಗೆ ಕಷ್ಟ ಬಂದಾಗ ನಮ್ಮ ಸಂಸ್ಥೆಯೇ ಸಹಾಯ ಮಾಡುವ ನೀಡುವ ತೀರ್ಮಾನ ಮಾಡಿತ್ತು. ನಮ್ಮ ಸಂಸ್ಥೆಯ ಮೂಲಕ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ದೇವು. ಬಳಿಕ ಈ ಬಗ್ಗೆ ಸರ್ಕಾರಕ್ಕೆ ಸಂತ್ರಸ್ತರಿಗೆ ಮನೆಕಟ್ಟಿಕೊಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾಗಿ ಹೇಳಿದರು. 
ಈ ಹಿಂದೆಯೂ ಕೂಡ ಉತ್ತರ ಕರ್ನಾಟಕದ ಪ್ರವಾಹ ಹಾಗೂ ಆಂಧ್ರಪ್ರದೇಶದ ಪ್ರವಾಹದ ವೇಳೆ ನಮ್ಮ ಸಂಸ್ಥೆಯಿಂದ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ವೇಳೆ ನಾವು ಕೆಲ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಸರ್ಕಾರ ಮನೆ ನಿರ್ಮಾಣಕ್ಕೆ ಸರಿಯಾದ ಜಾಗ ತೋರಿಸಬೇಕು, ವಿದ್ಯುತ್ ಹಾಗೂ ಲೇಬರ್ ಕ್ಯಾಂಪಿಗೆ ಜಾಗ ನೀಡಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರವೇ ನೀಡಿದ ನಕ್ಷೆಯಂತೆ ನಮ್ಮ ತಂಡ ಮನೆಗಳನ್ನ ಕಟ್ಟಿಕೊಡಲಿದೆ. ನಾವು ಸರ್ಕಾರಕ್ಕೆ ಹಣ ನೀಡುವುದಿಲ್ಲ. ನಾವೇ ಮನೆ ಕಟ್ಟಿಸಿಕೊಡುತ್ತೇವೆ. ಸರ್ಕಾರ ಜಾಗ ತೋರಿಸಿದ ಮರುದಿನವೇ ನಮ್ಮ ತಂಡ ಕೆಲಸ ಶುರುಮಾಡಲಿದೆ ಎಂದು ಸುಧಾಮೂರ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com