ಸಂಪುಟ ವಿಸ್ತರಣೆಗಾಗಿ 'ರಾಗಾ' ಅಪ್ಪಣೆಗಾಗಿ ಕಾದು ಕುಳಿತಿರುವ ರಾಜ್ಯ ಕಾಂಗ್ರೆಸ್
ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದ್ದು, ಸಂಪುಟ ವಿಸ್ತರಣಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಗ್ರೀನ್ ಸಿಗ್ನಲ್ ಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ...
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ನಾಯಕರ ತಂಡ ನಿನ್ನೆಯಷ್ಟೇ ದೆಹಲಿಗೆ ತೆರಳಿದ್ದು, ಇಂದು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.
ಭೇಟಿ ಬಳಿಕ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಮೂಡಿರಿುವ ಎಲ್ಲಾ ಗೊಂದಲಗಳು ಬಹುತೇಕ ಸ್ಪಷ್ಟವಾಗುವ ಸಾಧ್ಯತೆಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಖಚಿತವಾಗಿ ನೀಡುತ್ತಿದ್ದ ಭರವಸೆಗಳು ಅಸಲಿಯೋ ಅಥವಾ ಅತೃಪ್ತರ ಮೂಗಿಗೆ ಹಚ್ಚಿದ ಬೆಣ್ಣೆಯೋ ಎಂಬುದು ಇತ್ಯರ್ಥಗೊಳ್ಳಲಿದೆ.
ರಾಹುಲ್ ಅವರ ಭೇಟಿಗಾಗಿ ನಿನ್ನೆ ಸಂಜೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಜಾರ್ಜ್ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.
ಈ ನಾಯಕರು ಗುರುವಾರ ತಡರಾತ್ರಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದು, ಬಳಿಕ ಶುಕ್ರವಾರ ಬೆಳಿಗ್ಗೆ ರಾಹುಲ್ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಾಥಮಿಕ ಹಂತದ ಚರ್ಚೆ ವೇಳೆ ಅಸಲಿಗೆ ಪ್ರಸ್ತುತ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಸಂಪುಟ ವಿಸ್ತರಣೆ ಮಾಡಿದರೆ ಅದರಿಂದ ಉದ್ಭವವಾಗುವ ಭಿನ್ನಮತ ಯಾವ ರೀತಿ ಪಕ್ಷ ಹಾಗೂ ಸರ್ಕಾರದ ಮೇಲೆ ಪರಿಣಾಮ ಬೀರಬಹುದು ಮತ್ತು ವಿಸ್ತರಣೆ ಮಾಡದಿದ್ದರೆ, ಅದರಿಂದಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.