ಹೊಸ ವರ್ಷದ ದಿನ ಜನಿಸಿದ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ: ಮೇಯರ್ ಘೋಷಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಹೊಸ ವರ್ಷದ ದಿನ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ ನೀಡುವುದಾಗಿ ಬಿಬಿಎಂಪಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಹೊಸ ವರ್ಷದ ದಿನ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ ನೀಡುವುದಾಗಿ ಬಿಬಿಎಂಪಿ ಮೇಯರ್ ಗಂಗಾಂಬಿಕೆಯವರು ಬುಧವಾರ ಘೋಷಣೆ ಮಾಡಿದ್ದಾರೆ. 
ಪಾಲಿಕೆ ಕಚೇರಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮೇಯರ್ ಸಂಪತ್ ರಾಜ್ ಅವರು ಹೊಸ ವರ್ಷದ ದಿನ ಪಾಲಿಕೆಯ ಯಾವುದೇ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹಣ್ಣು ಮಗುವಿಗೆ ಪಿಂಕ್ ಬೇಬಿ ಯೋಜನೆಯಡಿ ರೂ.5 ಲಕ್ಷ ಠೇವಣಿ ಇಡುವುದನ್ನು ಜಾರಿಗೆ ತಂದಿದ್ದರು. ಈ ಯೋಜನೆಯನ್ನು ಬರುವ ಹೊಸ ವರ್ಷಕ್ಕೂ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. 
2019ರ ಜನವರಿ 1ನೇ ತಾರೀಖು (ಡಿಸೆಂಬರ್ 31ರ ಮಧ್ಯರಾತ್ರಿ 12ರ ಬಳಿಕ) ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಠೇವಣಿ ಇಡಲಾಗುವುದು. ಪಿಂಕ್ ಬೇಜಿ ಯೋಜನೆಗಾಗಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರೂ.1.20 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ ಮೊದಲು ಜನಿಸಿದ ಮಕ್ಕಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. 
ಒಂದು ವೇಳೆ ವರ್ಷದ ಮೊದಲ ದಿನ ಯಾವುದೇ ಹೆಣ್ಣು ಮಗು ಸಹಜ ಹೆರಿಗೆ ಮೂಲಗ ಜನಿಸದೇ ಹೋದರೆ, 2ನೇ ತಾರೀಖಿನಂದು ಜನಿಸಿದ ಹೆಣ್ಣು ಮಗುವಿಗೆ ಈ ಸೌಲಭ್ಯ ದೊರೆಯಲಿದೆ. ಒಂದು ವೇಲೆ ಅವಳಿ ಜವಳಿ ಮಕ್ಕಳಾದರೆ ಅದರಲ್ಲೂ ಮೊದಲು ಜನಿಸಿದ ಮಗುವಿಗೆ ಠೇವಣಿ ಇಡಲಾಗುವುದು. ಠೇವಣಿಯನ್ನು ಆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ವಿವಾಹದ ಸಂದರ್ಭದಲ್ಲಿ ಬಳಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com