ಮಹದಾಯಿ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಮಾಡುವ ಗೋವಾ ಪ್ರಸ್ತಾವಕ್ಕೆ ಕರ್ನಾಟಕ ವಿರೋಧ

ಮಹದಾಯಿ ವಿವಾದ ಸಂಬಂಧ ಗೋವಾ ಸರ್ಕಾರದ ದ್ವಂದ್ವ ನಿಲುವು ಮುಂದುವರೆದಿರುವಂತೆಯೇ, ಮಹದಾಯಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಬೇಕು ಎನ್ನುವ ಗೋವಾ ಸರ್ಕಾರದ ಪ್ರಸ್ತಾಪಕ್ಕೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಹದಾಯಿ ವಿವಾದ ಸಂಬಂಧ ಗೋವಾ ಸರ್ಕಾರದ ದ್ವಂದ್ವ ನಿಲುವು ಮುಂದುವರೆದಿರುವಂತೆಯೇ, ಮಹದಾಯಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಬೇಕು ಎನ್ನುವ ಗೋವಾ ಸರ್ಕಾರದ  ಪ್ರಸ್ತಾಪಕ್ಕೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ವಿವಾದ ಕುಡಿಯುವ ನೀರಿಗೆ ಸಂಬಂಧಿಸಿದ್ದಾಗಿದ್ದು, ಪ್ರಕರಣದ ವಿಚಾರಣೆ ಆದ್ಯತೆಯ ಮೇರೆಗೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. "ಮಹದಾಯಿ ನದಿ ನೀರು  ಹಂಚಿಕೆ ಕುರಿತಂತೆ ಉದ್ಭವಿಸಿರುವ ವಿವಾದವನ್ನು ಬಗೆಹರಿಸಲು ರಚಿಸಲಾಗಿರುವ ನ್ಯಾಯಾಧಿಕರಣದ ಅವಧಿಯನ್ನು ಮತ್ತೆ ವಿಸ್ತರಿಸಬೇಕೆಂಬ ಗೋವಾ ರಾಜ್ಯದ ಪ್ರಸ್ತಾವವನ್ನು ಕರ್ನಾಟಕ ರಾಜ್ಯ ಸಾರಾಸಗಟಾಗಿ ತಿರಸ್ಕರಿಸಿದೆ.  ಗೋವಾ ರಾಜ್ಯವು ಸಲ್ಲಿಸಿದ ತಕರಾರು ಅರ್ಜಿಯ ಮೇರೆಗೆ ರಚಿಸಲಾಗಿದ್ದ ಮಹದಾಯಿ ನ್ಯಾಯಾಧಿಕರಣದಲ್ಲಿ ಫೆಬ್ರವರಿ 6 ರಂದು ವಿಚಾರ ಪ್ರಾರಂಭವಾಗಬೇಕಿತ್ತು. ಆದರೆ, ಅಂದು ನ್ಯಾಯಾಧಿಕರಣದ ಮುಂದೆ ಹಾಜರಾದ  ಗೋವಾದ ಪರ ವಕೀಲರು ನ್ಯಾಯಾಧಿಕರಣದ ಅವಧಿಯ ವಿಸ್ತರಣೆ ಕುರಿತು ಪ್ರಸ್ತಾಪಿಸಿದರು".
"ಗೋವಾದ ಪ್ರಸ್ತಾಪ ಕುರಿತು ಅಭಿಪ್ರಾಯ ನೀಡುವಂತೆ ನ್ಯಾಯಾಧಿಕರಣವು ಸೂಚಿಸಿದಾಗ, ಸರ್ಕಾರದ ಗಮನಕ್ಕೆ ತಂದ ನಂತರವೇ ಈ ನಿಟ್ಟಿನಲ್ಲಿ ಅಭಿಪ್ರಾಯ ನೀಡುವುದಾಗಿ ತಿಳಿಸಿ, ಈ ಬಗ್ಗೆ ನಮಗೆ ಮಾಹಿತಿ ನೀಡಿದರು.  ಮೊದಲನೆಯದಾಗಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಅವಧಿ ವಿಸ್ತರಣೆ ಮಾಡಲೇಬೇಕಾದ ಪ್ರಸಂಗ ಉದ್ಭವಿಸಿದರೂ ಅಂತಾರಾಜ್ಯ ಜಲ ವಿವಾದ ಕಾಯಿದೆಗೆ  ತಿದ್ದುಪಡಿ ತರಬೇಕಾಗುತ್ತದೆ. ಅವಧಿ ವಿಸ್ತರಣೆ ಮಾಡಿದರೆ ಸಮಸ್ಯೆ ಬಗೆಹರಿಯುವುದು ಮತ್ತಷ್ಟು ವಿಳಂಬವಾಗುತ್ತದೆ. ಈ ವಿವಾದವು ಕುಡಿಯುವ ನೀರಿಗೆ ಸಂಬಂಧಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಆಧ್ಯತೆಯ ಮೇರೆಗೆ  ನಡೆಯಬೇಕೆಂಬುದು ರಾಜ್ಯದ ಸ್ಪಷ್ಟ ನಿಲುವಾಗಿದೆ. ಸರ್ಕಾರದ ಈ ನಿಲುವನ್ನು ಗೋವಾದ ಪರ ವಕೀಲರಿಗೆ ಹಾಗೂ ಮಹದಾಯಿ ನ್ಯಾಯಾಧಿಕರಣಕ್ಕೆ ನಮ್ಮ ರಾಜ್ಯದ ಪರ ವಕೀಲರು ಖಡಾಖಂಡಿತವಾಗಿ ತಿಳಿಸಿದ್ದಾರೆ" ಎಂದು  ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com