ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ದೌಡಾಯಿರುವ ಅಗ್ನಿಶಾಮಕ ದಳದ ವಾಹನಗಳು
ರಾಜ್ಯ
ಬೆಂಗಳೂರಿನ ಮತ್ತೊಂದು ಬಾರ್'ನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ದುರಂತ
ಕೆ.ಆರ್. ಮಾರುಕಟ್ಟೆ ಬಾರ್ ದುರಂತ ಪ್ರಕರಣದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ವೊಂದರಲ್ಲಿ ಗುರುವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಭಾರೀ ದುರಂತವೊಂದು ತಪ್ಪಿದೆ...
ಬೆಂಗಳೂರು: ಕೆ.ಆರ್. ಮಾರುಕಟ್ಟೆ ಬಾರ್ ದುರಂತ ಪ್ರಕರಣದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ವೊಂದರಲ್ಲಿ ಗುರುವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಭಾರೀ ದುರಂತವೊಂದು ತಪ್ಪಿದೆ.
ಮೈಸೂರು ರಸ್ತೆಯಲ್ಲಿರುವ ಗಜಾನನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಇಂದು ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಬಾರ್'ನ ನೆಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಎರಡು ಅಗ್ನಿಶಾಮಕ ದಳದ ವಾಹನದೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಾರ್ ಕೆಲಸ ಮುಗಿಸಿ ಮೇಲ್ಮಹಡಿಯಲ್ಲಿ ಸಿಬ್ಬಂದಿಗಳು ಮಲಗಿರುವುದನ್ನು ನೋಡಿದ ಪೊಲೀಸರು ಕೂಡಲೇ ಎಲ್ಲರನ್ನೂ ಹೊರಗೆ ಕರೆತಂದಿದ್ದಾರೆ.
ಬಳಿಕ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಲ್ಲ. ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಆದರೆ, ಘಟನೆಯಿಂದಾಗಿ ಬಾರ್'ನ ನೆಲ ಮಹಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಕಳೆದ ತಿಂಗಳು ಕೆ.ಆರ್. ಮಾರುಕಟ್ಟೆ ಬಳಿಯಿದ್ದ ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ